ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಯಾವುದೇ ಕಾರಣಕ್ಕೂ ರಾಜೀನಾಮೆ‌‌ ಕೊಡಲ್ಲ: ಈಶ್ವರಪ್ಪ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದರಲ್ಲಿ ಷಡ್ಯಂತ್ರವಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಮಗ್ರ ತನಿಖೆ ನಡೆಸಲು ಮನವಿ ಮಾಡಿದ್ದೇನೆ. ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತನಾಡುವೆ ಎಂದು ಅವರು ಹೇಳಿದರು.

ಕಾನೂನು ಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಂತಹ ವಿಚಾರದಲ್ಲಿ ಕಾಂಗ್ರೆಸ್ ನವರು ರಾಜೀನಾಮೆ ಕೇಳುತ್ತಿದ್ದು, ಡೆತ್ ನೋಟೇ ಬರೆದಿಲ್ಲ. ಸುಳ್ಳು ಹಬ್ಬಿಸಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ತಿಳಿಸಿದರು.

ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ, ಮೊದಲು ಆಡಳಿತಾತ್ಮಕ ಅನುಮೋದನೆ, ಮಂಜೂರಾತಿ ವರ್ಕ್ ಆರ್ಡರ್ ಇಶ್ಯೂ ಆಗಬೇಕು ಎಂದರು. 80 ಸಾರಿ ಅವರ ಮನೆಗೆ ಹೋಗಿದ್ದು, ಒಂದೇ ಒಂದು ಸಾರಿ ಅವರ ಮುಖ ನೋಡಲಿಲ್ಲ ಎಂದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂತೋಷ್ ನೀಡಿದ ದೂರಿನ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎಂದರು.

ನಾನು ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೆ, ಅವರಿಗೆ ಕೋರ್ಟ್ ಕೇಸ್ ಪರಿಗಣಿಸಿ ಸಂತೋಷ್ ಪಾಟೀಲ್ ಮತ್ತು ಕನ್ನಡದ ಮಾಧ್ಯಮವೊಂದಕ್ಕೆ ನೋಟೀಸ್ ನೀಡಿದೆ. ದೆಹಲಿಗೆ ಹೋಗಿ ಅಮಿತ್ ಶಾ ಅವರ ಕಚೇರಿಗೆ ದೂರು ನೀಡುವಲ್ಲಿ ಧೈರ್ಯ ತೋರಿದ್ದ ಸಂತೋಷ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನನಗೆ ಅನಿಸುತ್ತಿದ್ದು, ಅದು ಇನ್ನು ಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದರು.

ಕಾನೂನಿನ ನೀತಿ, ನಿಯಮ ಮೀರಿ ಹಣ ಕೊಡಲು ಬರುವುದಿಲ್ಲ ಎಂದು ಈಗಾಗಲೇ ನಮ್ಮ ಇಲಾಖೆ ಸ್ಪಷ್ಟನೆ ನೀಡಿದ್ದು, ಕೋರ್ಟ್ ನಲ್ಲಿ ಪ್ರಕರಣ ಮುಂದುವರಿಯುತ್ತದೆ ಎಂದರು.

ಸಂತೋಷ್ ಡೆತ್ ನೋಟ್ ಬರೆದಿಲ್ಲ, ವಾಟ್ಸ್ಆಪ್ ನಲ್ಲಿ ಟೈಪ್ ಮಾಡಿದ್ದಾರೆ. ಅಲ್ಲಿ ಕೈ ಬರಹವಿಲ್ಲ, ಸಹಿಯೂ ಇಲ್ಲ ಎಂದರು. ಕಾನೂನು ಬೇಕು ನಿಜ. ಅದಕ್ಕಿಂತಲೂ ಪ್ರಾಮಾಣಿಕತೆ ಮುಖ್ಯವಾಗಿದೆ.

ಗುತ್ತಿಗೆದಾರರ ಸಂಘದವರು ಯಾರಿಗೆ 40 ಪರ್ಸೆಂಟ್ ಕಮಿಷನ್ ನೀಡಿದ್ದಾರೆ ಎಂದು‌ ನೇರವಾಗಿ ಹೇಳಲಿ. ನಮ್ಮದು ಒಂದು ತಪ್ಪಿದ್ದರೆ ಹೇಳಿ ನಾನು ತಿದ್ದಿಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್ ನವರು ಇಂದ್ರಲೋಕ, ಚಂದ್ರಲೋಕಕ್ಕೆ‌ ಹೋಗಿ ಪ್ರತಿಭಟನೆ ಮಾಡಲಿ. ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

ಗುತ್ತಿಗೆದಾರ ಸಂತೋಷ್ ಸಾವಿನ ಪ್ರಕರಣ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ನಿಂದ ಯಾವುದೇ ಕರೆ ನನಗೆ ಬಂದಿಲ್ಲ ಎಂದರು.