ಕಾಂಗ್ರೆಸ್ ಅಪಪ್ರಚಾರದ ಪ್ರತಿಭಟನೆ ಟೂಲ್‍ಕಿಟ್‍ನ ಮುಂದುವರಿದ ಭಾಗ: ಉಡುಪಿ ಜಿಲ್ಲಾ ಬಿಜೆಪಿ ಆರೋಪ

ಉಡುಪಿ: ಕೊರೊನಾ ಸಂಕಷ್ಟದಿಂದ ವಿಶ್ವವೇ ಕಂಗೆಟ್ಟಿದ್ದರೂ ಪ್ರಧಾನಿ ಮೋದಿ ಅವರ ಸಮರ್ಥ ನೇತೃತ್ವದಲ್ಲಿ ದೇಶದಾದ್ಯಂತ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ನಡೆಗಳನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ಕಾಂಗ್ರೆಸ್, ಕೋವಿಡ್ ಲಸಿಕೆಯಿಂದ ಪ್ರಾರಂಭಗೊಂಡು ಎಲ್ಲ ವಿಚಾರಗಳಲ್ಲೂ ಅಪಪ್ರಚಾರದಲ್ಲಿ ತೊಡಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ನಾಯಕತ್ವದ
ಕೊರತೆಯಿಂದ ಸೊರಗಿರುವ ಕಾಂಗ್ರೆಸ್ ಇದೀಗ ಪೆಟ್ರೋಲ್ ಬೆಲೆ ಏರಿಕೆಯ ನೆಪವೊಡ್ಡಿ ಪೆಟ್ರೋಲ್ ಬಂಕ್‍ಗಳ ಎದುರು ನಾಟಕೀಯ ಪ್ರತಿಭಟನೆಗೈದು ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನತೆಯ ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ.

ಇತ್ತೀಚೆಗೆ ಕಾಂಗ್ರೆಸ್‍ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಪುನರ್ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿರುವುದು ಕಾಂಗ್ರೆಸ್‍ನ ದೇಶವಿರೋಧಿ ನಿಲುವಿಗೆ ಹಿಡಿದ ಕೈಗನ್ನಡಿಯಂತಿದೆ. ಕಾಂಗ್ರೆಸಿಗರು ಪ್ರತಿಭಟನೆಯಲ್ಲೂ ಶತ್ರು ರಾಷ್ಟ್ರ ಪಾಕಿಸ್ತಾನದ ಜಪ ಮಾಡುತ್ತಿರುವುದು ಕಾಂಗ್ರೆಸ್‍ನ ಪಾಕ್ ಪ್ರೀತಿಗೆ ಜ್ವಲಂತ ಉದಾಹರಣೆಯಾಗಿದೆ ಎಂದು ಟೀಕಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶವಾಸಿಗಳಿಗೆ ತೊಂದರೆ ಉಂಟಾಗಿದ್ದರೂ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೂಲಕ ಕೋವಿಡ್ ಲಸಿಕೆಯ ಬಗ್ಗೆ ಕಳೆದ ಒಂದು ವರ್ಷದಿಂದ ₹35,000 ಕೋಟಿಗೂ ಮಿಕ್ಕಿ ವೆಚ್ಚ ಮಾಡಲಾಗಿದ್ದು, ಹಣಕಾಸು ಉಳಿತಾಯವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ದೇಶದ ಇತಿಹಾಸದಲ್ಲಿ ಐತಿಹಾಸಿಕ ಅಭಿವೃದ್ಧಿ ಕಾರ್ಯಗಳಾಗಿರುವ ಪ್ರಧಾನಮಂತ್ರಿ ವಿದ್ಯುದ್ಧೀಕರಣ ಯೋಜನೆಯಡಿ 18,000ಕ್ಕೂ ಮಿಕ್ಕಿ ಹಳ್ಳಿಗಳ ವಿದ್ಯದ್ಧೀಕರಣ, ಉಚಿತ ಉಜ್ವಲ ಗ್ಯಾಸ್ ವಿತರಣೆ, ಆಯುಷ್ಮಾನ್ ಭಾರತ್ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಉಚಿತ ಕೋವಿಡ್ ಲಸಿಕೆ ವಿತರಣೆ ಮುಂತಾದ ನೂರಾರು ಜನಪರ ಯೋಜನೆಗಳಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಕೇವಲ ಅಪಪ್ರಚಾರದಲ್ಲಿ ತೊಡಗಿರುವುದು ಟೂಲ್‍ಕಿಟ್‍ನ ಮುಂದುವರಿದ ಭಾಗದಂತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಆತ್ರಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.