ಪ್ರಜಾಸತ್ತಾತ್ಮಕ ಭಾರತದ ದನಿ ಹತ್ತಿಕ್ಕುವ ಕೆಲಸ ಮುಂದುವರಿದಿದೆ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವ ವೇಳೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕಾಂಗ್ರೆಸ್ ನ ಮೂರು ಸದಸ್ಯರು ಸಹಿತ ಒಟ್ಟು ಎಂಟು ಸದಸ್ಯರನ್ನು ಅಮಾನತು ಮಾಡಲಾಗಿತ್ತು.

ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತು ಮಾಡಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಸತ್ತಾತ್ಮಕ ಭಾರತದ ದನಿ ಹತ್ತಿಕ್ಕುವ ಕೆಲಸ ಮುಂದುವರಿದಿದೆ. ಸಂಸದರಿಗೆ ಮೊದಲು ಮಾತನಾಡುವ ಅವಕಾಶ ನಿರಾಕರಿಸಲಾಯಿತು. ನಂತರ ಅವರನ್ನು ಅಮಾನತು ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೃಷಿಗೆ ಸಂಬಂಧಿಸಿದ ಕೆಟ್ಟ ಕಾನೂನುಗಳ ಬಗ್ಗೆ ಒಲವಿರುವವರು ರೈತರ ಸಂಕಷ್ಟಕ್ಕೆ ಕುರುಡಾಗಿದ್ದಾರೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭಾ ಸದಸ್ಯರಾದ ಡೊಲಾ ಸೇನ್, ಡೆರೆಕ್ ಒ ಬ್ರೇನ್ (ಟಿಎಂಸಿ), ಸಂಜಯ್ ಸಿಂಗ್ (ಎಎಪಿ), ಕೆ.ಕೆ.ರಾಗೇಶ್, ಎಲಮರಂ ಕರೀಂ  (ಸಿಪಿಎಂ), ರಾಜೀವ್ ಸತವ್, ರಿಪಿನ್ ಬೊರೆನ್, ಸೈಯದ್ ನಾಜಿರ್ ಹುಸೇನ್ (ಕಾಂಗ್ರೆಸ್) ಅವರ ಅಮಾನತು ಗೊತ್ತುವಳಿಯನ್ನು ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು.