ದೇಶದಲ್ಲಿ ಏರುತ್ತಲೇ ಇದೆ ಪೆಟ್ರೋಲ್‌, ಡೀಸೆಲ್‌ ದರ: ಜನಸಾಮಾನ್ಯರು ಕಂಗಾಲು

ಮುಂಬೈ: ದೇಶದಲ್ಲಿ ತೈಲ ಬೆಲೆ ಏರಿಕೆ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಸತತವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗುತ್ತಿದ್ದು, ಗುರುವಾರವೂ ದರ ಏರಿಕೆಯ ಓಟ ಮುಂದುವರಿದಿದೆ.

ಕಚ್ಚಾ ತೈಲ ದರದಲ್ಲೂ ಹೆಚ್ಚಳವಾಗುತ್ತಿರುವುದು ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಅದಾಗಲೇ ಭಾರತದಾದ್ಯಂತ ತೈಲ ದರವು ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ತಲಾ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ ಕ್ರಮವಾಗಿ ₹106.54 ಮತ್ತು ₹95.27 ಮುಟ್ಟಿದೆ. ಮುಂಬೈನಲ್ಲಿ ಪೆಟ್ರೋಲ್‌ ₹112.44 ಮತ್ತು ಡೀಸೆಲ್‌ ₹103.26ಕ್ಕೆ ಏರಿಕೆಯಾಗಿದೆ.

ಇನ್ನೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರತಿ ಲೀಟರ್‌ ಪೆಟ್ರೋಲ್‌ ₹110 ದಾಟಿದೆ. ಇಂದು ಪೆಟ್ರೋಲ್‌ ₹110.25 ತಲುಪಿದ್ದು, ಡೀಸೆಲ್‌ ದರ ₹101.12 ಆಗಿದೆ. ದಿನದಿಂದ ದಿನಕ್ಕೆ ತೈಲ ದರ ಏರುಗತಿಯಲ್ಲಿರುವುದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ, ನಗರ ಪ್ರದೇಶಗಳಲ್ಲಿ ಜನರು ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಒಲವು ತೋರಿದ್ದಾರೆ ಹಾಗೂ ಬೈಸಿಕಲ್‌ಗಳ ಸಂಚಾರವೂ ಹೆಚ್ಚಿದೆ.

ಕೋಲ್ಕತ್ತದಲ್ಲಿ ಪೆಟ್ರೋಲ್‌ ₹107.12, ಡೀಸೆಲ್‌ ₹98; ಚೆನ್ನೈನಲ್ಲಿ ಪೆಟ್ರೋಲ್‌ ₹103.26 ಮತ್ತು ಡೀಸೆಲ್‌ ₹99.68ಕ್ಕೆ ಮಾರಾಟವಾಗುತ್ತಿದೆ.

ಸೆಪ್ಟೆಂಬರ್‌ ಕೊನೆಯ ವಾರದ ನಂತರದಲ್ಲಿ ಪೆಟ್ರೋಲ್ ಬೆಲೆಯು 18 ಬಾರಿ, ಡೀಸೆಲ್ ಬೆಲೆಯು 20 ಬಾರಿ ಹೆಚ್ಚಳ ಆಗಿದೆ.