ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ 1,000 ವರ್ಷಗಳವರೆಗಿನ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ

ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾ.ಸ್ವ.ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಇಂದು ಶ್ರೀರಾಮಲಲ್ಲಾ ‘ಪ್ರಾಣ ಪ್ರತಿಷ್ಠೆಯ’ ವಿಧಿಗಳನ್ನು ಕೈಗೊಂಡರು.

ಪ್ರಧಾನಿಯವರು ಸುಮಾರು 8,000 ವಿಶೇಷ ಆಹ್ವಾನಿತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು.

ನಮ್ಮ ರಾಮ ಬಂದಿದ್ದಾನೆ! ರಾಮ ಲಲ್ಲಾ ಈಗ ಟೆಂಟ್‌ನಲ್ಲಿ ಇರುವುದಿಲ್ಲ. ಆತ ದೊಡ್ಡ ದೇವಸ್ಥಾನದಲ್ಲಿರುತ್ತಾನೆ ಎಂದು ಭಾಷಣ ಪ್ರಾರಂಭಿಸಿದ ಅವರು ಜ.22 ಈ ಐತಿಹಾಸಿಕ ದಿನವು ಹೊಸ ಯುಗವೊಂದಕ್ಕೆ ನಾಂದಿಯಾಗಲಿದ್ದು ಕಾಲಚಕ್ರವನ್ನು ಬದಲಾಯಿಸಲಿದೆ ಎಂದರು.

ನಮ್ಮ ಪ್ರೀತಿ ಮತ್ತು ತಪಸ್ಸಿನಲ್ಲಿ ಕೊರತೆಯಿತ್ತೆಂದು ನಾನು ಭಗವಾನ್ ರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ಇದರಿಂದಾಗಿ ರಾಮ ಮಂದಿರ ನಿರ್ಮಾಣವನ್ನು ಹಲವು ವರ್ಷಗಳಿಂದ ಮಾಡಲಾಗಿಲ್ಲ. ಆದಾಗ್ಯೂ, ಇಂದು ಆ ಅಂತರವನ್ನು ನಿವಾರಿಸಲಾಗಿದೆ ಮತ್ತು ಶ್ರೀರಾಮನು ನಮ್ಮನ್ನು ಕ್ಷಮಿಸುತ್ತಾನೆ ಎಂಬ ವಿಶ್ವಾಸವಿದೆ ಎಂದರು.

ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವೂ ರಾಮನ ಅಸ್ತಿತ್ವದ ಬಗ್ಗೆ ದಶಕಗಳ ಕಾಲ ಕಾನೂನು ಹೋರಾಟ ನಡೆಸಲಾಗಿದೆ. ನ್ಯಾಯ ಒದಗಿಸಿದ ನ್ಯಾಯಾಂಗಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಮನ ದೇವಾಲಯವನ್ನು ಕಾನೂನು ರೀತಿಯಲ್ಲಿ ನಿರ್ಮಿಸಲಾಗಿದೆ ಎಂದರು.

ರಾಮ ಮಂದಿರದ ನಿರ್ಮಾಣವು ಭಾರತೀಯ ಸಮಾಜದ ಪ್ರಬುದ್ಧತೆಯ ಪ್ರತಿಬಿಂಬವಾಗಿದೆ. ಇದು ಕೇವಲ ವಿಜಯವಲ್ಲ ನಮ್ರತೆಯ ಸಂದರ್ಭವಾಗಿದೆ. ರಾಮ ಮಂದಿರ ನಿರ್ಮಾಣ ಸಮಸ್ತ ಭಾರತೀಯರ ಧೈರ್ಯ, ಶಾಂತಿ, ಸಮನ್ವಯ ಮತ್ತು ಸಹಬಾಳ್ವೆಯ ಪ್ರತೀಕ ಎಂದು ಅವರು ಹೇಳಿದರು.

ರಾಮಮಂದಿರಕ್ಕ್ಕಾಗಿ ಹೋರಾಡಿದ ಮತ್ತು ಶ್ರಮಿಸಿದ ಎಲ್ಲರನ್ನೂ ಸ್ಮರಿಸಿದ ಅವರು ನಾವು ಈಗ ಮುಂದಿನ 1,000 ವರ್ಷಗಳವರೆಗೆ ಭಾರತದ ಅಡಿಪಾಯವನ್ನು ಹಾಕಬೇಕಾಗಿದೆ. ಈ ಕ್ಷಣದಿಂದ ಸಮರ್ಥ, ಭವ್ಯವಾದ, ದೈವಿಕ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.

ಭಾರತ ಈಗ ಧನಾತ್ಮಕ ಶಕ್ತಿಯಿಂದ ತುಂಬಿದೆ. ಸಂಪ್ರದಾಯ, ಆಧುನಿಕತೆಯ ಮಾರ್ಗದರ್ಶನದಿಂದ ಅದು ಸಮೃದ್ಧಿಯನ್ನು ಪಡೆಯುತ್ತದೆ ಎಂದರು.