ಕಳತ್ತೂರು: ವಿಶ್ವ ಬಂಟರ ಪ್ರತಿಷ್ಠಾನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಾಣ

ಕಳತ್ತೂರು: ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಕಿರಣ್ ಶೆಟ್ಟಿ ಇವರು ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನಕ್ಕೆ 8 ಲಕ್ಷ ರೂ ಆರ್ಥಿಕ ಸಹಾಯ ನೀಡಿದ್ದು, ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಒಟ್ಟು 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡಿನಲ್ಲಿ 7, ಮಂಗಳೂರಿನಲ್ಲಿ 5, ಕುಂದಾಪುರದಲ್ಲಿ 1 ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮದಲ್ಲಿ 4 ಮನೆಗಳನ್ನು ನಿರ್ಮಿಸಲಾಗಿದೆ.

ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಪ್ರತಿಷ್ಠಾನ ಸಮಾರಂಭದಲ್ಲಿ 17 ಬಂಟ ಸಮಾಜದ ಮಹಿಳೆಯರಿಗೆ ಮನೆಯ ಬೀಗದ ಕೈಯನ್ನು ಹಸ್ತಾಂತರಿಸಲಾಯಿತು. ಡಿ. 21ರಂದು ಕಳತ್ತೂರು ಗ್ರಾಮದ 4 ಬಂಟ ಮಹಿಳೆಯರ ಮನೆಗಳನ್ನು ಪ್ರತಿಷ್ಠಾನದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಕಳತ್ತೂರು ಜನ ಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿಯವರು ಪ್ರತಿಷ್ಠಾನದ ಅಧ್ಯಕ್ಷ ಎ.ಜೆ.ಶೆಟ್ಟಿ, ಟ್ರಸ್ಟಿ ಶೇಖರ ಬಿ.ಶೆಟ್ಟಿ, ಕಳತ್ತೂರು ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ಇವರಿಗೆ ಮನವಿ ನೀಡಿದ್ದು, ಕಳತ್ತೂರು ಗ್ರಾಮಕ್ಕೆ 4 ಮನೆ ನಿರ್ಮಿಸಿಕೊಡಲಾಗಿದೆ. ಮನೆಗಳನ್ನು ಟ್ರಸ್ಟಿ ಶೇಖರ ಬಿ.ಶೆಟ್ಟಿ ಕಳತ್ತೂರು ಉದ್ಘಾಟಿಸಿದರು. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು.

ಮನೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟ ಮಕರ ಕನ್ಟ್ರಕ್ಷನ್ ಕಾಪು ಇದರ ಆಡಳಿತ ನಿರ್ದೇಶಕ ಸುಧಾಕರ್ ಶೆಟ್ಟಿ ಮಲ್ಲಾರು ಇವರನ್ನು ಫಲಾನುಭವಿಗಳ ಪರವಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸನ್ಮಾನಿಸಿದರು.

ಕಾಪು ಬಂಟರ ಸಂಘದ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ ಕಾಪು, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಕರ್ ಬಿ.ಶೆಟ್ಟಿ ಕಳತ್ತೂರು ವೇದಿಕೆಯಲ್ಲಿದ್ದರು.

ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ದಯಾನಂದ ಶೆಟ್ಟಿ ದೆಂದೂರು ಸ್ವಾಗತಿಸಿ, ದಿವಾಕರ್ ಡಿ. ಶೆಟ್ಟಿ ಕಳತ್ತೂರು ವಂದಿಸಿದರು.