ಡಿಸೆಂಬರ್ ಅಂತ್ಯದೊಳಗೆ 1.5 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣ: ಕೇಂದ್ರ ಸರ್ಕಾರ

ನವದೆಹಲಿ: 1.50 ಲಕ್ಷ ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎಬಿ-ಎಚ್‌ಡಬ್ಲ್ಯೂಸಿ) ಸ್ಥಾಪಿಸುವ ಗುರಿ ಈ ವರ್ಷದ ಡಿಸೆಂಬರ್‌ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಂಡಿಸಿದ ಆರೋಗ್ಯ ಹಕ್ಕು ಮಸೂದೆ 2021 ರ ಶಾಸನದ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಡಾ ಮಾಂಡವೀಯ, ದೇಶದಲ್ಲಿ ಒಟ್ಟು 1.50 ಲಕ್ಷ ಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದ್ದು, ಈಗಾಗಲೇ ಒಂದು ಲಕ್ಷ 22 ಸಾವಿರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಈ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಸೇರಿದಂತೆ ಮೂರು ರೀತಿಯ ಕ್ಯಾನ್ಸರ್‌ಗಳ ಜೊತೆಗೆ 13 ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ನಡೆಸಲಾಗುವುದು ಎಂದು ಅವರು ಹೇಳಿದರು.

ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮತ್ತು ಸರಳೀಕರಿಸಲು ತೆಗೆದುಕೊಳ್ಳಲಾದ ವಿವಿಧ ಕ್ರಮಗಳನ್ನು ಡಾ.ಮಾಂಡವಿಯಾ ಸಭೆಗೆ ವಿವರಿಸಿದರು.