ಹೈದರಾಬಾದ್ (ತೆಲಂಗಾಣ): ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ರಾಜ್ಯದ 17 ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಿಂದ ಸ್ಪರ್ಧಿಸಲು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದೆ.
2024ರ ಲೋಕಸಭಾ ಚುನಾವಣೆಯ ವೇಳೆ ತೆಲಂಗಾಣದಿಂದ ಸ್ಪರ್ಧಿಸ ಬೇಕು ಎಂದು ರಾಜ್ಯ ಕಾಂಗ್ರೆಸ್ನ ರಾಜಕೀಯ ವ್ಯವಹಾರಗಳ ಸಮಿತಿ ನಿರ್ಣಯ ತೆಗೆದುಕೊಂಡಿದೆ. ಸೋಮವಾರ ನಡೆದ ತೆಲಂಗಾಣ ಕಾಂಗ್ರೆಸ್ ತನ್ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
ತೆಲಂಗಾಣ ಕಾಂಗ್ರೆಸ್ ಪ್ರಧಾನ ಕಚೇರಿಯ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಭಾಗವಹಿಸಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಪಿಎಸಿ ಸದಸ್ಯರಿಗೆ ವಿವರಿಸಿದರು.
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶಬ್ಬೀರ್ ಅಲಿ, “ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ಹಿರಿಯ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯವನ್ನು ಪಿಎಸಿ ಅಂಗೀಕರಿಸಿದೆ. ತೆಲಂಗಾಣದಿಂದ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸುವಂತೆ ಪಿಎಸಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ನಾವು ಅವರಿಗೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆಯಲಿದ್ದೇವೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಮೇದಕ್ನಿಂದ ಹಿಂದೆ ಸ್ಪರ್ಧಿಸಿದ್ದರು. ಅದನ್ನು ಪುನರಾವರ್ತಿಸಲು ಸೋನಿಯಾ ಗಾಂಧಿ ತೆಲಂಗಾಣದಿಂದ ಸ್ಪರ್ಧಿಸಬೇಕು” ಎಂದಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಹೈದರಾಬಾದ್ನಲ್ಲಿ ತೆಲಂಗಾಣ ಕಾಂಗ್ರೆಸ್ನ ರಾಜಕೀಯ ವ್ಯವಹಾರಗಳ ಸಮಿತಿ (PAC) ಸಭೆ ಸೇರಿತು. ತೆಲಂಗಾಣದ ಯಾವುದಾದರೂ ಸ್ಥಾನದಿಂದ ಸ್ಪರ್ಧಿಸುವಂತೆ ಮನವಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಸಿಎಂ ಆಗುವವರೆಗೆ ಪ್ರತಿನಿಧಿಸುತ್ತಿದ್ದ ಮಲ್ಕಾಜ್ಗಿರಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ.
ಈ ಹಿಂದೆ ಸೋನಿಯಾ ಗಾಂಧಿ 1999ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಎರಡೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. 2004ರ ನಂತರ ಸೋನಿಯಾ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತಾ ಬರುತ್ತಿದ್ದಾರೆ.ಸೋನಿಯಾ ಗಾಂಧಿಯವರ ಅತ್ತೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1980ರ ಚುನಾವಣೆಯಲ್ಲಿ ಮೇದಕ್ (ಹಿಂದಿನ ಆಂಧ್ರ ಪ್ರದೇಶ) ನಿಂದ ಸ್ಪರ್ಧಿಸಿದ್ದರು. ಅವರು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. 1984ರಲ್ಲಿ ಅವರ ಹತ್ಯೆಯಾಗುವವರೆಗೂ ಕ್ಷೇತ್ರವನ್ನು ಪ್ರತಿನಿಧಿಸಿದರು. ಹೈದರಾಬಾದ್ ಪ್ರದೇಶದ ಪಕ್ಕದಲ್ಲಿರುವ ಮೆದಕ್ 2000ನೇ ಇಸವಿಯವರೆಗೂ ಕಾಂಗ್ರೆಸ್ನ ಪ್ರಬಲ ಭದ್ರಕೋಟೆಯಾಗಿದೆ.