ಉಡುಪಿ: ಸೋಮವಾರದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್.ಐ.ಸಿ ಕಚೇರಿ ಎದುರು ಧರಣಿ ನಡೆಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ , ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಎಲ್.ಐ.ಸಿ ಗೆ ಆಗಿರುವ ಅನ್ಯಾಯಕ್ಕಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೆಲವು ಮಂದಿ ಸೇರಿ ದೇಶದ ಬ್ಯಾಂಕ್ ಗಳನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 12 ಕೋಟಿ ಯುವ ಜನತೆ ನಿರುದ್ಯೋಗಿಗಳಾಗಿ ಪರಿತಪಿಸುತ್ತಿದ್ದಾರೆ. ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಜನರಿಗೆ ನ್ಯಾಯ ಒದಗಿಸಬೇಕು. ಈ ದೇಶದಲ್ಲಿ ಒಟ್ಟು 20 ಮಂದಿ ಬ್ಯಾಂಕ್ ಗಳಿಂದ 10 ಲಕ್ಷ ಕೋಟಿ ರೂ ಹಣವನ್ನು ದೋಚಿಸಿದ್ದಾರೆ. ಇದರಲ್ಲಿ ವಿಜಯ ಮಲ್ಯ ಒಬ್ಬರು ಬಿಟ್ಟರೇ ಉಳಿದವರೆಲ್ಲರೂ ಗುಜರಾತಿಗಳೇ ಆಗಿದ್ದಾರೆ. ಇವರೆಲ್ಲ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ದೇಶದ ಹಣವನ್ನು ದೋಚುವುದು ಕೂಡ ಒಂದು ರೀತಿಯಲ್ಲಿ ಉಗ್ರವಾದ ಆಗಿದೆ. ಆದುದರಿಂದ ಸರಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕುಶಲ್ ಶೆಟ್ಟಿ ಮಾತನಾಡಿ, ಯುಪಿಎ ಸರಕಾರದ ಅವಧಿಯಲ್ಲಿ ಭಾರತ ಸರಕಾರ ಮಾಡಿದಂತಹ ಸಾಲದ ನಾಲ್ಕು ಪಟ್ಟು ಸಾಲ ಇಂದಿನ ನರೇಂದ್ರ ಮೋದಿ ಸರಕಾರ ಮಾಡಿದೆ. ಈ ಸರಕಾರದ ಬಂಡವಾಳ ಏನೂ ಇಲ್ಲ. ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅಭಿವೃದ್ಧಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ಮುಖ್ಯಸ್ಥ ರಾಹುಲ್ ಗಾಂಧಿಯವರು ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದರು. ಅದರಂತೆ ಮೋದಿ ನೇತೃತ್ವದ ಸರಕಾರ ದರೋಡೆ ಮಾಡುತ್ತಿದೆ. ಎಲ್.ಐ.ಸಿಯಲ್ಲಿ ಮಧ್ಯಮ ವರ್ಗದವರು ತಮ್ಮ ಉಳಿತಾಯದ ಹಣವನ್ನು ಇಟ್ಟಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಅವರು ಇಟ್ಟಿರುವ ಹಣವನ್ನು ಪಡೆಯಲೂ ಪರದಾಡಬೇಕಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಹರೀಶ್ ಕಿಣಿ, ಅಣ್ಣಯ್ಯ ಶೇರಿಗಾರ್, ಪ್ರಖ್ಯಾತ್ ಶೆಟ್ಟಿ, ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಕಬೀರ್ ಅಹ್ಮದ್, ಗೀತಾ ವಾಕ್ಯ ರೋಶನಿ ಒಲಿವೇದಾ, ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ವಿಜಯ ಪೂಜಾರಿ, ಲೂವಿಸ್ ಲೋಬೊ, ಕೀರ್ತಿ ಶೆಟ್ಟಿ, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಾಳ ಮೊದಲಾದವರು ಉಪಸ್ಥಿತರಿದ್ದರು.