ಉಡುಪಿ: ದೇಶ ವಿರೋಧಿ ಮಾನಸಿಕತೆಯ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಸ್ ಡಿಪಿಐ ಜೊತೆಗೆ ಕಾಂಗ್ರೆಸ್ಸಿನ ಅಪವಿತ್ರ ಮೈತ್ರಿ, ಒಳ ಒಪ್ಪಂದ ಸಾಕ್ಷಿ ಸಮೇತ ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಪ್ರಬುದ್ಧ ಜನತೆ ಕಾಂಗ್ರೆಸ್ಸಿನ ಷಡ್ಯಂತ್ರ ಮತ್ತು ಆಮಿಷಗಳಿಗೆ ಬಲಿಯಾಗಬಾರದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಈ ಹಿಂದೆ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಸ್ಡಿಪಿಐ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡುವಂತೆ ಕಾಂಗ್ರೆಸ್ಸಿನ ರಾಜ್ಯ ಮುಖಂಡರು ಒಳ ಒಪ್ಪಂದಕ್ಕಾಗಿ ಅಂಗಲಾಚಿರುವುದನ್ನು ಸ್ವತಃ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮೊಹಮ್ಮದ್ ತುಂಬೆ ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗಪಡಿಸಿರುವುದು ಗೋಮುಖ ವ್ಯಾಘ್ರ ಕಾಂಗ್ರೆಸ್ಸಿನ ಮುಖವಾಡವನ್ನು ಕಳಚಿ ಹಾಕಿದೆ. ಎಸ್ಡಿಪಿಐ ಸಹಿತ ಎಲ್ಲ ದೇಶ ವಿರೋಧಿ ಮತಾಂಧ ಜಿಹಾದಿ ಸಂಘಟನೆಗಳನ್ನು ಬೆಳೆಸಿದ್ದೇ ಕಾಂಗ್ರೆಸ್ ಎಂದು ಟೀಕಿಸಿದರು.
ಈ ಕಾರಣಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಅಧಿಕಾರಾವಧಿಯಲ್ಲಿ ಸುಮಾರು 1,600ಕ್ಕೂ ಹೆಚ್ಚು ಪಿಎಫ್ಐ, ಎಸ್ಡಿಪಿಐ, ಕೆಎಫ್ಡಿ ಕಾರ್ಯಕರ್ತರನ್ನು ಬಂಧನದಿಂದ ಮುಕ್ತಗೊಳಿಸಿ, ಅವರ 175 ಪ್ರಕರಣಗಳನ್ನು ವಜಾಗೊಳಿಸಿದ್ದು, ಆ ಬಳಿಕ ರಾಜ್ಯದಾದ್ಯಂತ ನಡೆದ ಸರಣಿ ಗಲಭೆಗಳು, ಹಿಂದೂ ಕಾರ್ಯಕರ್ತರ ಮಾರಣಹೋಮ ಕಾಂಗ್ರೆಸ್ಸಿನ ಕುಟಿಲ ನೀತಿಗೆ ಜ್ವಲಂತ ಉದಾಹರಣೆಯಾಗಿದೆ.
ಎಸ್ಡಿಪಿಐ ಜೊತೆಗಿನ ಮೈತ್ರಿಯನ್ನು ಹಲವಾರು ಕಾಂಗ್ರೆಸ್ ಮುಖಂಡರು ಸಮರ್ಥಿಸುತ್ತಿರುವುದು ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಸಮಾನ ನಾಗರಿಕ ಸಂಹಿತೆ ಜಾರಿ ವಿರುದ್ದ ಎಸ್ಡಿಪಿಐನಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಭಾಗಿಯಾಗಿರುವುದು ಕಾಂಗ್ರೆಸ್ಸಿನ ದ್ವಂದ್ವ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ.
ಅಧಿಕಾರಕ್ಕಾಗಿ ಯಾರೊಂದಿಗೂ ಕೈಜೋಡಿಸಲು ಹಾಗೂ ಯಾವ ಹೇಯ ಕೃತ್ಯಕ್ಕೂ ಹೇಸದ ಕಾಂಗ್ರೆಸ್ಸಿಗೆ ಜನಹಿತ, ದೇಶದ ಹಿತ ಮುಖ್ಯವಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಭ್ರಷ್ಟಾಚಾರ, ದೇಶ ವಿರೋಧಿ ನೀತಿ, ಸುಳ್ಳು ಭರವಸೆಗಳ ವರಸೆಯಿಂದ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ ದೇಶದಾದ್ಯಂತ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತಗೊಂಡಿರುವುದು ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದನ್ನು ರುಜುವಾತುಪಡಿಸಿದೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿರುವ ದೇಶ ವಿರೋಧಿ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.