ಗೋಹತ್ಯೆ ವಿರೋಧಿ ಕಾನೂನಿನ ಬಗ್ಗೆ ಸಚಿವ ವೆಂಕಟೇಶ್ ವಿವಾದಿತ ಹೇಳಿಕೆ: ಮಿತಿಯಲ್ಲಿರಲು ಸೂಚಿಸಿದ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು: ರಾಜ್ಯದಲ್ಲಿನ ಗೋಹತ್ಯೆ ವಿರೋಧಿ ಕಾನೂನಿನ ಬಗ್ಗೆ ಕರ್ನಾಟಕ ಪಶುಸಂಗೋಪನೆ ಸಚಿವ ಕೆ ವೆಂಕಟೇಶ್ ಅವರ ಅಭಿಪ್ರಾಯಗಳಿಗಾಗಿ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಅವರಿಗೆ ಛೀಮಾರಿ ಹಾಕಿದೆ ಮತ್ತು “ತಮ್ಮ ಮಿತಿಯೊಳಗೆ” ಇರುವಂತೆ ಹೇಳಿದೆ ಎಂದು ವರದಿಯಾಗಿದೆ.

ಕರ್ನಾಟಕ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಕರ್ನಾಟಕದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸಚಿವ ಕೆ ವೆಂಕಟೇಶ್ ಅವರಿಗೆ ತಮ್ಮ ಮಿತಿಯಲ್ಲಿರಲು ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೆ.ವೆಂಕಟೇಶ್ ಅವರು ಎಮ್ಮೆ, ಹೋರಿಗಳನ್ನು ಕಡಿಯುವುದಾದರೆ ಗೋಹತ್ಯೆ ಮಾಡುವುದರಲ್ಲಿ ತಪ್ಪೇನು? ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಹೈನುಗಾರರ ಮೇಲೆ ಮತ್ತು ಸರಿಯಾದ ಹಾಲಿನ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಗಮನ ಕೇಂದ್ರೀಕರಿಸಿ ಹಾಗೂ ತಮ್ಮ ವ್ಯಾಪ್ತಿಯಲ್ಲಿಲ್ಲದ ನೀತಿ ವಿಷಯಗಳ ಬಗ್ಗೆ ಮಾತನಾಡಬೇಡಿ ಎಂದು ಅವರನ್ನು ಕೋರಲಾಗಿದೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆಯೂ ಕೆ.ವೆಂಕಟೇಶ್ ಅವರನ್ನು ಕೇಳಿಕೊಂಡಿದ್ದಾರೆ.

ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರುಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2020 ರ ತಿದ್ದುಪಡಿಯನ್ನು ರಾಜ್ಯದ ರೈತರ ದೊಡ್ಡ ಹಿತಾಸಕ್ತಿಗಾಗಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದರು. ವಯಸ್ಸಾದ ಮತ್ತು ಸತ್ತ ಜಾನುವಾರುಗಳನ್ನು ಸಂರಕ್ಷಣೆ ಹಾಗೂ ವಿಲೇವಾರಿ ಮಾಡಲು ರೈತರು ಕಷ್ಟ ಪಡುತ್ತಿದ್ದಾರೆ ಎಂದು ಅವರು ವಾದಿಸಿದ್ದರು.

ಕೆ ವೆಂಕಟೇಶ್ ಅವರ ಈ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ನಾಯಕ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಪಕ್ಷವು ಕರ್ನಾಟಕದಲ್ಲಿ ತನ್ನ ಅವಧಿಯನ್ನು ಗೋಹತ್ಯೆಯೊಂದಿಗೆ ಪ್ರಾರಂಭಿಸಲು ಬಯಸುತ್ತದೆಯೇ ಎಂದು ಕೇಳಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವು ಅಂತಿಮ ನಿಲುವು ತಳೆದ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆ ಎಂದು ರೂಪಾಲಾ ಹೇಳಿದ್ದಾರೆ.

ಕಾನೂನಿಗೆ ತಿದ್ದುಪಡಿ ತರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.