ಉಡುಪಿ: ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷರು ಹಾಗೂ ಅವರ ಸಹಚರರು ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ಸಮಿತಿ, ಹಿರಿಯಡಕ ಇದರ ವತಿಯಿಂದ ಹಿರಿಯಡಕದ ಗ್ರಾಪಂ ವಠಾರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್ ಅವರು, ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯಮ, ಫ್ಯಾಕ್ಟರಿ ಆರಂಭಿಸಲು ಹೊರ ಊರಿಗಳಿಂದ ಸಾಕಷ್ಟು ಹೂಡಿಕೆದಾರರು ಬರುತ್ತಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದಲ್ಲದೆ, ಊರಿನ ಅಭಿವೃದ್ಧಿ ಕೂಡ ಆಗುತ್ತದೆ. ಆದರೆ, ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷರು ಉದ್ಯಮಿಗಳಿಗೆ ಬೆದರಿಕೆ ಒಡ್ಡುವುದು, ಬಲತ್ಕಾರವಾಗಿ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಗ್ರಾಮಕ್ಕೆ ಹೂಡಿಕೆ ಮಾಡಲು ಬರುವ ಉದ್ಯಮಿಗಳಿಗೆ ಸಹಾಯ ಮಾಡಬೇಕು. ಆ ಮೂಲಕ ನಮ್ಮ ಊರಿನ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಜನಪ್ರತಿನಿಧಿಗಳ ಮಾಡಬೇಕು. ಆದರೆ ಗ್ರಾಪಂ ಉಪಾಧ್ಯಕ್ಷರು ಆ ಕೆಲಸ ಬಿಟ್ಟು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುವುದು, ಧಮ್ಕಿ ಹಾಕುವುದರಲ್ಲಿ ತೊಡಗಿದ್ದಾರೆ. ಬೊಮ್ಮರಬೆಟ್ಟು ಗ್ರಾಪಂ ಇತಿಹಾಸದಲ್ಲಿ ಇಂತಹ ಜನಪ್ರತಿನಿಧಿಗಳು ಯಾವತ್ತು ಆಯ್ಕೆಯಾಗಿರಲಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.
ಕಾಪು ಶಾಸಕರು ಇಂತಹ ಭ್ರಷ್ಟ ಗ್ರಾಪಂ ಸದಸ್ಯನನ್ನು ತಮ್ಮ ಬಳಿ ಇಟ್ಟುಕೊಂಡು ಜನರಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ?. ಇಂತಹ ವ್ಯಕ್ತಿಗಳನ್ನು ಶಾಸಕರೇ ಸ್ವತಃ ಪೋಷಿಸಿ, ಸಹಕಾರ ನೀಡುತ್ತಿದ್ದಾರೆ ಎಂಬ ಭಾವನೆ ಇಡೀ ಬೊಮ್ಮರಬೆಟ್ಟು ಗ್ರಾಮದ ಜನರಲ್ಲಿ ಮೂಡಿದೆ. ಜನತೆಗೆ ಶಾಸಕರೇ ಉತ್ತರ ಕೊಡಬೇಕಾಗಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕಿಣಿ ಅಲೆವೂರು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಸಮಿತಿ ಸದಸ್ಯ ಸಂತೋಷ್ ಭೈರಂಪಳ್ಳಿ ಮಾತನಾಡಿದರು.
ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸೌರಭ ಬಲ್ಲಾಳ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಅಧ್ಯಕ್ಷ ಚರಣ್ ವಿಠಲ, ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಪೂಜಾರಿ, ಮುಖಂಡರಾದ ಪುಷ್ಪಾ ಅಂಚನ್, ಸಹನಾ ಕಾಮತ್, ಲಕ್ಷ್ಮೀನಾರಾಯಣ ಪ್ರಭು ಉಪಸ್ಥಿತರಿದ್ದರು.












