ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ: ಡಿಕೆಶಿಗೆ ಪ್ರಾಣ ಕೊಡಲು ಸಿದ್ಧ- ಕೊಳ್ಕೆಬೈಲ್

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯ ಮೇಲಿನ ಸಿಬಿಐ ದಾಳಿ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಅಜ್ಜರಕಾಡುವಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಅಜ್ಜರಕಾಡುವರೆಗೆ ನೂರಾರು ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ನಡೆಯಿತು. ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯ ಬಳಿಕ ಹಲವು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಡಿಕೆಶಿಗೆ ಪ್ರಾಣ ಕೊಡಲು ಸಿದ್ಧ: ಕೊಳ್ಕೆಬೈಲ್
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಷಡ್ಯಂತ್ರದ ಮೂಲಕ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ. ಡಿಕೆಶಿ ಅವರಿಗೆ ಎದುರಿಸುವ ಶಕ್ತಿ ಇದೆ. ಬಿಜೆಪಿ ಎಲ್ಲ ಷಡ್ಯಂತ್ರಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಅವರಲ್ಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಹೇಳಿದರು.

ಡಿಕೆಶಿ ಅವರಿಗೆ ಏನೂ ಆಗಲ್ಲ ನಾವು ಬಿಡಲ್ಲ. ಅವರಿಗೆ ನಮ್ಮ ಪ್ರಾಣ ಕೊಡಲು ಸಿದ್ಧರಿದ್ದೇವೆ. ಸಿಬಿಐ ಅಧಿಕಾರಿಗಳು ಮೊದಲು ಸಿಎಂ ಪುತ್ರನ ಭ್ರಷ್ಟಾಚಾರದ ತನಿಖೆಯನ್ನು ಮೊದಲು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ವರೋನಿಕಾ ಕರ್ನೆಲಿಯೋ, ಯತೀಶ್ ಕರ್ಕೇರ, ಕುಶಲ್ ಶೆಟ್ಟಿ, ಜನಾರ್ದನ ಭಂಡಾರ್ಕರ್, ಭಾಸ್ಕರ ರಾವ್ ಕಿದಿಯೂರು, ಗೀತಾ ವಾಗ್ಳೆ, ಇಸ್ಮಾಯಿಲ್ ಆತ್ರಾಡಿ, ಶಬ್ಬೀರ್ ಅಹ್ಮದ್, ಅಝೀಝ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.