ರಾಹುಲ್ ಗಾಂಧಿಗೆ ಇಡಿ ಸಮನ್ಸ್: ಮೋದಿ ಸರ್ಕಾರದಿಂದ ಇಡಿ ದುರ್ಬಳಕೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಇಡಿ ಪ್ರಶ್ನಿಸುವ ಮುನ್ನವೇ ಕೇಂದ್ರ ಸರ್ಕಾರದ ಇಡಿ ದುರ್ಬಳಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಮ್ಮು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಇಂದು ರಾಹುಲ್ ಗಾಂಧಿ ವಿಚಾರಣೆಗಾಗಿ ಇಡಿ ಕಚೇರಿಗೆ ತೆರಳುವ ಸಾಧ್ಯತೆಯಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ರಾಹುಲ್ ಜೊತೆ ಇಡಿ ಕಚೇರಿಗೆ ಹೋಗಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಸತ್ಯ ಕಾ ಸಂಗ್ರಾಮ್’ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗುವ ಮುನ್ನ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಸಂದೇಶವನ್ನು ನೀಡಲು ಕಾಂಗ್ರೆಸ್ ಪಕ್ಷವು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಏತನ್ಮಧ್ಯೆ, ಕಾನೂನು ಸುವ್ಯವಸ್ಥೆಯ ಕಾರಣದಿಂದಾಗಿ ಕಾಂಗ್ರೆಸ್ ನಾಯಕರ ದೆಹಲಿಯ ಪಕ್ಷದ ಮುಖ್ಯ ಕೇಂದ್ರ ಕಚೇರಿಯಿಂದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಗೆ ಅನುಮತಿಯನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.