ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ನಾಯಕತ್ವ ಬದಲಾವಣೆಯ ಕೂಗು ಜೋರಾಗಿ ಕೇಳಿಬರುತ್ತಿದೆ.
ಈ ನಡುವೆ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ 23 ನಾಯಕರು ಪತ್ರ ಬರೆದು ನಾಯಕತ್ವದ ಬಿಕ್ಕಟ್ಟು ಹಾಗೂ ಆಂತರಿಕ ಚುನಾವಣೆಗೆ ಆಗ್ರಹಿಸಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಮನೀಶ್ ತಿವಾರಿ, ಮಿಲಿಂದ್ ದೇವ್ರಾ, ಜಿತಿನ್ ಪ್ರಸಾದ್ ಸೇರಿದಂತೆ 23 ನಾಯಕರು ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತಂತೆ ನಾಳೆ (ಆ.24) ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಮುಖಂಡರು ಬರೆದಿರುವ ಪತ್ರಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕರೆಲ್ಲರೂ ಒಟ್ಟಿಗೆ ಸೇರಿ ಹೊಸ ನಾಯಕರನ್ನು ಗುರುತಿಸುವಂತೆ ಹೇಳಿದ್ದಾರೆ. ಹಂಗಾಮಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಇಚ್ಛೆ ಇಲ್ಲ. ನೂತನ ಅಧ್ಯಕ್ಷರು ಗಾಂಧಿ ಕುಟುಂಬದಿಂದ ಹೊರತಾದವರೇ ಆಗಿರಬೇಕು ಎಂದು ಸೋನಿಯಾ ಗಾಂಧಿ ತಿಳಿಸಿರುವುದಾಗಿ ವರದಿಯಾಗಿದೆ.
ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಮೇ 25ರಂದು ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ಅವರೂ ಕೂಡ ‘ಗಾಂಧಿ ಪರಿವಾರದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.