ಉಡುಪಿ: ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಕಳೆದ ಹತ್ತು ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆಗೊಂಡಿಲ್ಲ. ಈಗಾಗಲೇ ನಾಡದೋಣಿ ಸಂಘದವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ತಕ್ಷಣ ಸೀಮೆಎಣ್ಣೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ ಹೊರತಾಗಿಯೂ ಸರಕಾರ ನಿರ್ಲಕ್ಷ್ಯ ಧೋರಣೆ ಮುಂದುವರಿಸಿರುವುದು ಖಂಡನಾರ್ಹವಾಗಿದೆ. ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಪ್ರತಿ ತಿಂಗಳು 300 ಲೀಟರ್ ಸೀಮೆಎಣ್ಣೆ ನೀಡುತ್ತಿತ್ತು. ಈಗ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ 5 ಶಾಸಕರು, ಒಬ್ಬ ಸಂಸದೆ ಇದ್ದರೂ ಕೂಡ ಮೀನುಗಾರರ ಪ್ರಾಮಾಣಿಕ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಉಸ್ತುವಾರಿ ಸಚಿವರಾಗಲಿ, ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳಾಗಿ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ಮುಂದುವರಿಸಿರುವುದು ನಿಜಕ್ಕೂ ಬೇಸರದ ವಿಷಯ.
ಸೀಮೆಎಣ್ಣೆ ಕೊರೆತೆಯಿಂದಾಗಿ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಕಷ್ಟಕರವಾಗುತ್ತಿದ್ದು, ಇದರಿಂದಾಗಿ ಸಣ್ಣ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರಕಾರವು ತಕ್ಷಣ ಮೀನುಗಾರರ ಸಮಸ್ಯೆಗೆ ಸ್ಪಂದಿಸಿ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿದೆ.
1. ಸರಕಾರ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಹದಿನೈದು ದಿನದೊಳಗೆ ಸೀಮೆ ಎಣ್ಣೆ ಪೂರೈಸಬೇಕು.
2. ಸೀಮೆ ಎಣ್ಣೆ ಬಿಡುಗಡೆ ಮಾಡಿದ ನಂತರ ಅದನ್ನು ಸಮರ್ಪಕವಾಗಿ ಹಂಚಿಕೆಯಾಗಲು ವ್ಯವಸ್ಥೆಯಲ್ಲಿರುವ ಲೋಪವನ್ನು ಸರಿಪಡಿಸಿ ಮೀನುಗಾರರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
3. ಕರಾವಳಿ ಕರ್ನಾಟಕದ ಮೂರು ಜಿಲ್ಲೆಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಸೀಮೆ ಎಣ್ಣೆ ವಿತರಣೆಯ ವಿಳಂಬದಲ್ಲಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು.
4. ಮೀನುಗಾರರಿಗೆ ಮನೆ ಕಟ್ಟಲು ಸರಕಾರ ನೀಡುವ ಅನುದಾನದಲ್ಲೂ ವಿಳಂಬ ಧೋರಣೆ ಮುಂದುವರಿಸಿದ್ದು ತಕ್ಷಣ ಬಿಡುಗಡೆ ಮಾಡಬೇಕು.
ಹತ್ತು ದಿನದೊಳಗೆ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಮೀನುಗಾರರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.