ನವದೆಹಲಿ: ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರು ಬುಧವಾರ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.
ನವದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪ್ರತಕ್ರಿಯಿಸಿರುವ ಜಿತಿನ್ ಪ್ರಸಾದ, ಕಾಂಗ್ರೆಸ್ ಜೊತೆ ಮೂರು ತಲೆಮಾರಿನ ಬಾಂಧವ್ಯವನ್ನು ಹೊಂದಿದ್ದೇನೆ. ಆದ್ದರಿಂದ ಈ ಮಹತ್ವದ ನಿರ್ಧಾರವನ್ನು ಸಾಕಷ್ಟು ಚಿಂತನೆಯ ಬಳಿಕೆ ತೆಗೆದುಕೊಂಡಿದ್ದೇನೆ. ಕಳೆದ 8-10 ವರ್ಷಗಳಲ್ಲಿ ನಿಜವಾದ ರಾಷ್ಟ್ರೀಯ ಪಕ್ಷ ಎಂಬುದೊಂದು ಇದ್ದರೆ ಅದು ಬಿಜೆಪಿ, ಇತರೆ ಪಕ್ಷಗಳು ಪ್ರಾದೇಶಿಕ ಎಂದು ಹೇಳಿದ್ದಾರೆ.
ಜಿತಿನ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ಬಳಿಕ 2004ರಲ್ಲಿ ಲೋಕಸಭೆಗೆ ಮೊದಲ ಬಾರಿ ಆಯ್ಕೆಯಾದರು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
2020 ಮಾರ್ಚ್ ತಿಂಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಮತ್ತೋರ್ವ ನಾಯಕ ಪಕ್ಷ ಬಿಟ್ಟಿರುವುದು ಕಾಂಗ್ರೆಸ್ಗೆ ದೊಡ್ಡ ಆಘಾತ ನೀಡಿದೆ.