ನವದೆಹಲಿ: ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಮೆಚ್ಚುಗೆ ಸೂಚಿಸಿ ಹೊಗಳಿದ್ದಾರೆ. ಆದರೆ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.
ಕಾಂಗ್ರೆಸ್ ನಾಯಕ, ವಕ್ತಾರ ರಣದೀಪ್ ಸುರ್ಜೆವಾಲ ಪ್ರಧಾನಿ ನಡೆಯನ್ನು ಟೀಕಿಸಿದ್ದರೆ, ಅದೇ ಪಕ್ಷದ ಮತ್ತೋರ್ವ ನಾಯಕರಾಗಿರುವ ಆನಂದ್ ಶರ್ಮಾ ಪ್ರಧಾನಿ ನಡೆಗೆ ಮೆಚ್ಚುಗೆ ಸೂಚಿಸಿ ಹೊಗಳಿರುವುದು ಸಾಕಷ್ಟು ಚರ್ಚೆ ಗ್ರಾಸವಾಗಿದೆ.
ಮೋದಿ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆನಂದ್ ಶರ್ಮಾ, ಪ್ರಧಾನಿಯ ನಡೆಯನ್ನು ಸ್ವಾಗತಿಸಿದ್ದು, ಪ್ರಧಾನಿ ಮೋದಿ ಅವರ ನಡೆ ಭಾರತೀಯ ವಿಜ್ಞಾನಿಗಳಿಗೆ ಹಾಗೂ ಅವರ ಶ್ರಮವನ್ನು ಗುರುತಿಸುವಂಥದ್ದಾಗಿದೆ. ಇದೊಂದೇ ನಡೆ ಕೊರೊನಾ ಎದುರಿಸಲು ಮುಂಚೂಣಿಯಲ್ಲಿರುವವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದು ಶರ್ಮಾ ಮೋದಿಯನ್ನು ಹೊಗಳಿದ್ದಾರೆ.
ಆನಂದ್ ಶರ್ಮಾ ರಾಜ್ಯಸಭೆಯಲ್ಲಿ ವಿಪಕ್ಷದ ಉಪನಾಯಕರಾಗಿದ್ದು, ಪಕ್ಷದ ಸುಧಾರಣೆಗಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದ 23 ಮಂದಿ ಪೈಕಿ ಇವರೂ ಒಬ್ಬರಾಗಿದ್ದಾರೆ.

















