ಪ.ಜಾತಿ ಮತ್ತು ಪ. ಪಂಗಡದ ಬಗ್ಗೆ ಕಾಂಗ್ರೆಸ್ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದೆ: ಬಿ ಶ್ರೀರಾಮುಲು

ಬಳ್ಳಾರಿ: ಹಲವು ದಶಕಗಳ ಕಾಲ ಆಳ್ವಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಗಳ ಬಗ್ಗೆ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದ್ದರು. ಈ ಸಮುದಾಯಗಳ ಕುರಿತು ಶಕುನಿ ವಾತ್ಸಲ್ಯವನ್ನು ಪ್ರದರ್ಶನ ಮಾಡಿದ್ದರು ಎಂದು ರಾಜ್ಯದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.

ಬಳ್ಳಾರಿಯಲ್ಲಿ ನ 20ರಂದು ಬಿಜೆಪಿ ಎಸ್‍.ಟಿ. ಮೋರ್ಚಾ ನವಶಕ್ತಿ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ನ್ಯಾಯದ ವಿಚಾರದಲ್ಲಿ ನುಡಿದಂತೆ ನಡೆದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಮಾವೇಶವನ್ನು ಸಾಧನಾ ಸಮಾವೇಶದ ಮಾದರಿಯಲ್ಲಿ ಏರ್ಪಡಿಸಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು. ಕಾಂಗ್ರೆಸ್ಸಿಗರು ಕಪಟ ರಾಜಕಾರಣ ಮಾಡಿದರು. ನಮ್ಮ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ. ಕಾಂಗ್ರೆಸ್ ಸಾಧನೆ ಸೊನ್ನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಬಿಜೆಪಿಯ ಶಕ್ತಿಯಾಗಿದ್ದವು. ಈಗಲೂ ಶಕ್ತಿಯಾಗಿಯೇ ಮುಂದುವರಿದಿದ್ದು, ಮುಂದೆಯೂ ಬಿಜೆಪಿಗೆ ಬೆಂಬಲ ಕೊಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದಿನ ಸಿಎಂ ಯಡಿಯೂರಪ್ಪ ಅವರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಪ್ರಕಟಿಸಿ ರಜೆ ಘೋಷಿಸಿದ್ದಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರು. ಬಿಜೆಪಿ ಆಡಳಿತದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಗಂಗಾ ಕಲ್ಯಾಣ ಯೋಜನೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಪರಿಶಿಷ್ಟ ವರ್ಗಗಳಿಗೆ ಸಚಿವಾಲಯದ ಮಂತ್ರಿ ಮಾದಿ ನನಗೆ ಅವಕಾಶ ಕೊಟ್ಟಿದ್ದಾರೆ. ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲೂ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಮಹರ್ಷಿ ವಾಲ್ಮೀಕಿ – ಕನಕದಾಸರ ಪುತ್ಥಳಿಗೆ ಗೌರವಾರ್ಪಣೆ ಮಾಡಿದ್ದು, ಹಿಂದುಳಿದ ಜಾತಿಗಳ ಏಳಿಗೆಗೆ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಸಮಾವೇಶದಲ್ಲಿ ಬೊಮ್ಮಾಯಿ ಮತ್ತು ಮೋದಿ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್, ಕೇಂದ್ರ-ರಾಜ್ಯ ಸರಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಎಲ್ಲ ಪೂರ್ವತಯಾರಿ ನಡೆದಿದೆ ಎಂದರು.

ಬೀದರ್ ನಿಂದ ಚಾಮರಾಜನಗರದವರೆಗೆ ಪಕ್ಷದ ಸಮುದಾಯಗಳ ಕಾರ್ಯಕರ್ತರು, ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಿರಿಯ ನಾಯಕರೂ ಭಾಗವಹಿಸುತ್ತಾರೆ. ಆರೋಗ್ಯ ವ್ಯವಸ್ಥೆ ನೋಡಿಕೊಳ್ಳಲು ಆಂಬುಲೆನ್ಸ್, ಆರೋಗ್ಯ ಕೇಂದ್ರವೂ ಇರಲಿದೆ. 10 ಸಾವಿರ ಬಸ್, 25 ಸಾವಿರ ಕ್ರೂಸರ್ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶದ ಯಶಸ್ಸಿಗೆ 41 ಸಮಿತಿ ರಚಿಸಿದ್ದು, 5 ಸಾವಿರ ಕಾರ್ಯಕರ್ತರನ್ನು ಜೋಡಿಸಿದ್ದೇವೆ. 200ಕ್ಕೂ ಅಧಿಕ ಶೌಚಾಲಯಗಳಿರುತ್ತವೆ. 28 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. 8 ಸಾವಿರದಿಂದ 10 ಸಾವಿರ ಬಸ್ಸುಗಳು ಬರಲಿವೆ. 25 ಸಾವಿರ ಕ್ರೂಸರ್ ವಾಹನಗಳು, 10 ಸಾವಿರ ಕಾರುಗಳು, 25 ಸಾವಿರ ಬೈಕ್‍ಗಳು ಬರಲಿವೆ, 2 ಹೆಲಿಪ್ಯಾಡ್‍ಗಳೂ ಇರಲಿವೆ. 15 ರಿಂದ 20 ಸಾವಿರ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಶಾಸಕ ಸೋಮಶೇಖರ ರೆಡ್ಡಿಯವರು ಕಾಲ್ನಡಿಗೆಯಲ್ಲಿ ಬರಲಿದ್ದಾರೆ. 160 ಕಲಾತಂಡಗಳು ಭಾಗವಹಿಸಲಿವೆ. 130 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯುತ್ತಿದೆ. ಸಮಾವೇಶದ ವೇದಿಕೆ ಮತ್ತು ಕಲಾವಿದರಿಂದ ಮನೋರಂಜನೆ ನೀಡುವ ವೇದಿಕೆ ರಚಿಸಲಾಗಿದೆ. 3.20 ಲಕ್ಷ ಚದರಡಿ ಪೆಂಡಾಲ್ ವ್ಯವಸ್ಥೆ ಮಾಡಿದ್ದೇವೆ. 1 ಲಕ್ಷ ಚದರ ಅಡಿಯಲ್ಲಿ ಅಡುಗೆ ಸಿದ್ಧಗೊಳ್ಳಲಿದೆ. ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಊಟದ ವ್ಯವಸ್ಥೆ ಮಾಡಲಿದ್ದೇವೆ. 300ಕ್ಕೂ ಹೆಚ್ಚು ಊಟದ ಕೌಂಟರ್ ಇರಲಿವೆ. 3 ಸಾವಿರ ಕಾರ್ಯಕರ್ತರು ಊಟದ ವ್ಯವಸ್ಥೆಗೆ ಸಹಕರಿಸಲಿದ್ದಾರೆ ಬಿಜೆಪಿ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ಎಸ್‍ಸಿ, ಎಸ್‍ಟಿ ಸಮುದಾಯ ಮತ್ತು ಜನರಿಗೆ ತಿಳಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೆಕಾರ್, ನರಸಿಂಹ ನಾಯಕ, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ವೀರೇಂದ್ರ ಸಿಂಹ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮತ್ತು ಬಳ್ಳಾರಿ ಪ್ರಭಾರಿಗಳಾದ ಸಿದ್ದೇಶ್ ಯಾದವ್, ಬಳ್ಳಾರಿ ಜಿಲ್ಲಾಧ್ಯಕ್ಷ ಮುರಹರಿಗೌಡ, ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಬುಡ ಅಧ್ಯಕ್ಷ ಮಾರುತಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಬಸಲಿಂಗಪ್ಪ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಓಬಳೇಶ ಹೆಚ್., ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್. ದಿವಾಕರ್, ಹಿರಿಯರಾದ ಮಹಿಪಲ್ ಉಪಸ್ಥಿತರಿದ್ದರು.