ಉಡುಪಿ: ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲಾ, ಬಜರಂಗದಳವನ್ನು ಸಮೀಕರಿಸುವ ಮೂಲಕ ಪಕ್ಷವೊಂದು ಭಕ್ತರ ಭಾವನೆಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ. ಹನುಮಂತ ದೇಶ ವಿದೇಶ ಸೇರಿದಂತೆ ಪ್ರತಿ ಭಾರತೀಯನ ಹೃದಯದಲ್ಲಿ ಪೂಜನೀಯ ದೇವರು ಎಂದು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ. ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ. ಪ್ರಜ್ಞಾವಂತ ಮತದಾರರು ಇದನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರಕಾರದಿಂದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬಜರಂಗದಳವನ್ನು ನಿಷೇಧಿಸುವ ಯಾವ ಪ್ರಸ್ತಾವನೆಯೂ ಕಾಂಗ್ರೆಸ್ ಮುಂದೆ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ ಬಿಜೆಪಿಯು ಪ್ರಣಾಳಿಕೆಯಲ್ಲಿನ ವಿಷಯಗಳನ್ನು ತಿರುಚಿ ಹಿಂದೂಗಳು ಆರಾಧಿಸುವ ಹನುಮಂತನ ಜೊತೆ ತನ್ನ ಸಂಘಟನೆ ಭಜರಂಗದಳವನ್ನು ಹೋಲಿಕೆ ಮಾಡಿರುವುದು ಬಿಜೆಪಿಯ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಬಿಜೆಪಿ ಮತಗಳಿಕೆಗಾಗಿ ದೇವರುಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವುದು ಅವರಲ್ಲಿಯ ಅಭಿವೃದ್ಧಿಯ ಚಿಂತನೆಯ ಕೊರತೆ ಕಾರಣ. ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಮಾಜವನ್ನು ವಿಭಜಿಸುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಕಠಿಣ ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದರೆ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪೂಜಿಸುತ್ತದೆ ಹಾಗೂ ಪ್ರಚೋದಿಸುತ್ತದೆ ಎಂದು ಅರ್ಥ ಎಂದಿದ್ದಾರೆ.
ಪ್ರಣಾಳಿಕೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದು ಇದನ್ನು ಬಿಜೆಪಿ ವಿರೋಧಿಸುವುದರಿಂದ ಬಿಜೆಪಿಗೆ ಕಾನೂನಿನ ಮೇಲೆಯೂ ವಿಶ್ವಾಸವಿಲ್ಲ ಹಾಗೂ ಗೌರವೂ ಇಲ್ಲ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ಶಾಂತಿ, ಸೌಹಾರ್ದ, ಸಮಾಜ ಕಟ್ಟುವ ಉದ್ದೇಶದಿಂದ ಪ್ರಣಾಳಿಕೆಯಲ್ಲಿ ಈ ಬಗ್ಗೆ ತಿಳಿಸಿದೆ. ಆದರೆ ಜಾತಿ ಧರ್ಮವನ್ನು ಒಡೆದು ಆಳುವ ನೀತಿ ಅನುಸರಿಸುವ ಬಿಜೆಪಿಗೆ ಸಮಾಜದಲ್ಲಿ ಶಾಂತಿ ಸೌರ್ಹಾದತೆ ಬೇಕಾಗಿಲ್ಲ. ಅಮಾಯಕರ ನೆತ್ತರಲ್ಲಿ ಮತ ಫಸಲು ಪಡೆಯುವ ಉದ್ದೇಶ ಹೊಂದಿರುವ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದ ನೋವುಂಡ ಕರಾವಳಿ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. “ಹನುಮಾನ್ ಶ್ರೀ ಮುಖ್ಯಪ್ರಾಣ” ಚಾಲೀಸ್ ಅನ್ನು ನಾನು ಪ್ರತಿನಿತ್ಯ, ಆರಾಧಿಸುತ್ತೇನೆ, ಪಠಿಸುತ್ತೇನೆ. “ಶ್ರೀ ಆಂಜನೇಯನೇ” ನನಗೆ ಪ್ರೇರಣೆ, ಚಾಲೀಸಾ ನನ್ನ ಪಾಲಿನ, ಭಕ್ತಿ ಶಕ್ತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.