ಬಳ್ಳಾರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಯಾರ ಜೊತೆಗೂ ಮೈತ್ರಿ ಇಲ್ಲದೇ ಈ ಸಂಖ್ಯಾಬಲ ಸಾಧಿಸುತ್ತೇವೆ ಎಂದು ಅವರು ಹೇಳಿದ್ದಾರೆ. ರಾಜ್ಯ ವಿಧಾನಸಭೆಯು 224 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 150 ಸ್ಥಾನಗಳು ಬೇಕಾಗಿರುತ್ತದೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ 150 ವಿಧಾನಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಗೆದ್ದು ಯಾವುದೇ ಬೆಂಬಲವಿಲ್ಲದೇ ಸರ್ಕಾರ ರಚಿಸುವುದು ಖಚಿತ ಎಂದರು. ಈ ಬಾರಿ ಜನತೆ ಸ್ಪಷ್ಟ ಜನಾದೇಶ ನೀಡಲಿದ್ದು, 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಶನಿವಾರದ ವೇಳೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 1,000 ಕಿ.ಮೀ. ಯಾತ್ರೆ ಪೂರ್ಣಗೊಳಿಸಿದೆ. ತಮ್ಮ ಪಾದಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಹಲವಾರು ಬಾರಿ ಆಡಳಿತ ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಬಿರುಕು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ ನಾವು ನಿರೀಕ್ಷಿತ ತಂಡವನ್ನು ಹೊಂದಿದ್ದೇವೆ ಮತ್ತು ಪ್ರಸ್ತುತ ನಮ್ಮ ಗಮನವು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜನಾದೇಶವನ್ನು ಗೆಲ್ಲುವುದು ಮಾತ್ರ. ಗೆದ್ದ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವ ಪ್ರಕ್ರಿಯೆಯನ್ನು ಆಧರಿಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.