ಮಂಗಳೂರು: ತ್ರಿಶಾ ಕ್ಲಾಸಸ್ ನಲ್ಲಿ ತರಬೇತಿ ಪಡೆದು ಕಳೆದ ಜೂನ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿ.ಎ. ಫೈನಲ್, ಸಿ.ಎ. ಇಂಟರ್ ಮಿಡಿಯೆಟ್ ಮತ್ತು ಸಿಎಸ್‍ಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ತ್ರಿಶಾ ಕಾಲೇಜ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಎ.ಸುನೀಲ್ ಅಂಬ್ಲಾನಿಯವರು “ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಲಭಿಸಬೇಕಾದರೆ ನಂಬಿಕೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಎಂಬ ಮೂರು ಸೂತ್ರಗಳು ಅದರ ಕೀಲಿಕೈ ಆಗಿರಬೇಕು, ಇದನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬಹುದು” ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರ ಡಾ.ನಾರಾಯಣ್ ಕಾಯರ್‍ಕಟ್ಟೆ ಮಾತನಾಡಿ “ಅನುಭವ, ಸ್ಪೂರ್ತಿ ಪಡೆಯುವಿಕೆ ಮೊದಲಾದುವುಗಳ ಮೂಲಕ ವಿದ್ಯಾರ್ಥಿಯು ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಎ ಅಶ್ವಿನಿ ಶೆಣೈ, ಸಿಎ ಕೆ.ಬಾಲಸುಬ್ರಮಣ್ಯನ್, ಸಿಎ ಸಂಗೀತ್ ಶರತ್, ಸಿಎ ಮಂದಾರ ಪಿ.ಶೆಟ್ಟಿ, ಸಿಎ ಶ್ರೀಲತಾ ಕಾಮತ್ ಅವರನ್ನೂ ಹಾಗೂ ಸಿಎ ಇಂಟರ್ಮೀಡಿಯೆಟ್ ನಲ್ಲಿ ಉತ್ತೀರ್ಣರಾದ 27 ವಿದ್ಯಾರ್ಥಿಗಳನ್ನೂ ಮತ್ತು ಸಿಎಸ್ ಇಇಟಿಯಲ್ಲಿ ಉತ್ತೀರ್ಣನಾದ ಒಬ್ಬ ವಿದ್ಯಾರ್ಥಿಯನ್ನೂ ಪೋಷಕರ ಸಮಕ್ಷಮದಲ್ಲಿ ಅಭಿನಂದನಾ ಪತ್ರ ಹಾಗೂ ಸ್ಮರಣೀಕೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ ಅಂಚನ್, ತ್ರಿಶಾ ಕ್ಲಾಸಸ್‍ನ ಮಂಗಳೂರು ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಯಶಸ್ವಿನಿ ಯಶ್‍ಪಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಧನ್ಯಶ್ರೀ ನಿರೂಪಿಸಿದರು, ವೈಷ್ಣವಿ ಶೆಟ್ಟಿ ವಂದಿಸಿದರು.