ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಮುಂಜಾನೆ ಇಸ್ರೇಲ್ನಿಂದ ಭಾರತಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಆಪರೇಷನ್ ಅಜಯ್ ಭಾಗವಾಗಿ ಭಾನುವಾರ ಬೆಳಗ್ಗೆ 274 ಭಾರತೀಯರನ್ನು ಒಳಗೊಂಡ ನಾಲ್ಕನೇ ವಿಮಾನವು ಇಸ್ರೇಲ್ನಿಂದ ಹೊರಟಿದೆ ಎಂದು ಹೇಳಿದ್ದಾರೆ.
ಇಸ್ರೇಲ್ನಲ್ಲಿ ಸಿಲುಕಿರುವ ಸುಮಾರು 18000 ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಗುರುವಾರದಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನೋಂದಣಿಯೂ ಆರಂಭವಾಗಿದೆ.
ಶನಿವಾರದಂದು ಮೂರನೇ ವಿಮಾನವು ಇಸ್ರೇಲ್ನ ಟೆಲ್ ಅವೀವ್ನಿಂದ ದೆಹಲಿಗೆ ಆಗಮಿಸಿತ್ತು. ಶನಿವಾರ ಬೆಳಗ್ಗೆ 235 ಭಾರತೀಯ ನಾಗರೀಕರನ್ನು ಹೊತ್ತ ಎರಡನೇ ವಿಮಾನವು ಟೆಲ್ ಅವೀವ್ ನಿಂದ ನವದೆಹಲಿಯ ಇಂದಿರಾಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಆಗಮಿಸಿತ್ತು. ಶುಕ್ರವಾರ 212 ಜನರನ್ನು ಒಳಗೊಂಡಿದ್ದ ಮೊದಲ ವಿಮಾನವು ಶುಕ್ರವಾರ ದೆಹಲಿಗೆ ಆಗಮಿಸಿತ್ತು.
ಮುಂದುವರೆದ ಇಸ್ರೇಲ್ ಮತ್ತು ಹಮಾಸ್ ಉಗ್ರರ ಸಂಘರ್ಷ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕಳೆದ ಒಂದು ವಾರದಿಂದ ಸಂಘರ್ಷ ನಡೆಯುತ್ತಿದೆ. ಸಂಘರ್ಷದಲ್ಲಿ ಸಾವಿರಾರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಕೂಡ ಹಮಾಸ್ ಉಗ್ರ ಮೇಲೆ ದಾಳಿ ನಡೆಸುತ್ತಿದೆ. ಈ ಸಂಬಂಧ ಗಾಜಾಪಟ್ಟಿಯಲ್ಲಿರುವ ನಾಗರೀಕರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನಾಪಡೆ ಸೂಚನೆ ನೀಡಿತ್ತು.