ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಪ್ಲೇಟ್, ಧ್ವಜ, ಕಪ್, ಪ್ಲಾಸ್ಟಿಕ್ ಸ್ಪೂನ್, ಅಂಟಿಕೊಳ್ಳುವ ಫಿಲ್ಮ್, ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆ, ಸ್ಟ್ರಾ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ಈಗಾಗಲೇ ನಿಷೇಧಿಸಲಾಗಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನವದೆಹಲಿಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮದಂತೆ ಜುಲೈ 1 ರಿಂದ ಮೇಲ್ಕಂಡ ನಿಷೇಧಿತ ಉತ್ಪನ್ನಗಳ ಜೊತೆಗೆ ಹೆಚ್ಚುವರಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಸ್ಟಿಕ್ಗಳೊಂದಿಗೆ ಇಯರ್ ಬಡ್ಸ್, ಬಲೂನ್ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿ, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ಕ್ರೀಮ್ ಸ್ಟಿಕ್, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೈರೀನ್ ಅಥವಾ ಥರ್ಮಾಕೋಲ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್ ಮತ್ತು ಲೋಟ, ಫೋರ್ಕ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಚಾಕು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್ಗಳು, ಆಮಂತ್ರಣ ಪತ್ರ ಮತ್ತು ಸಿಗರೇಟ್ ಪ್ಯಾಕೆಟ್, 100 ಮೈಕ್ರಾನ್ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿ.ವಿ.ಸಿ ಬ್ಯಾನರ್ಗಳು ಹಾಗೂ ಪ್ಲಾಸ್ಟಿಕ್ ಸ್ಟಿಕರ್ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ
ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮೇಲ್ಕಾಣಿಸಿದ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರು, ಇ- ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರ, ಸಿನಿಮಾ ಮನೆ, ಪ್ರವಾಸೋದ್ಯಮ ಸ್ಥಳ, ಶಾಲಾ- ಕಾಲೇಜುಗಳು, ಕಚೇರಿ ಸಂಕೀರ್ಣ, ಆಸ್ಪತ್ರೆ, ಇತರೆ ಸಂಸ್ಥೆಗಳು ಮತ್ತು ಸಾಮಾನ್ಯ ಸಾರ್ವಜನಿಕರು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸಬೇಕು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಜೂನ್ 30 ರ ಒಳಗೆ ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮ ಕೈಗೊಳ್ಳಬೇಕು.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಪರಿಸರ (ಸಂರಕ್ಷಣೆ) ಕಾಯ್ದೆ, 1986 ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮತ್ತು ಮುಚ್ಚುವ ಆದೇಶವನ್ನು ನೀಡಲಾಗುವುದು ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ವಯ ಪರಿಸರ ಪರಿಹಾರವಾಗಿ ಪ್ರತಿ ಟನ್ಗೆ 5,000 ರೂ. ದಂಡ ವಿಧಿಸಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.