ಅವಿಭಜಿತ ದ.ಕನ್ನಡದಲ್ಲಿ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಲೋಕಾಯುಕ್ತ ಠಾಣೆಗೆ ದೂರು ನೀಡಿ: ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್

ಮಂಗಳೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಜನತೆಗೆ ಭ್ರಷ್ಟಾಚಾರದ ವಿರುದ್ದ ಯಾವುದೇ ರೀತಿಯ ದೂರು ಅಥವಾ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಲಿದ್ದಲ್ಲಿ, ಮಂಗಳೂರಿನ ಊರ್ವಾ ಸ್ಟೋರಿನಲ್ಲಿರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು-ಉಡುಪಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಹೇಳಿದ್ದಾರೆ.

ಸೋಮವಾರದಂದು ಊರ್ವಾಸ್ಟೋರ್ ನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಲೋಕಾಯುಕ್ತದ ವಾಪ್ತಿಯು ಅವಿಭಜಿತ ದ.ಕ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳೆರಡಲ್ಲೂ ಇದ್ದು, ಈ ಹಿಂದೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರಿನಲ್ಲಿ ಸ್ಥಾಪನೆಯಾಗಿದ್ದು, 2016 ರ ವರೆಗೆ ಲೋಕಾಯುಕ್ತದಡಿಯಲ್ಲಿತ್ತು. 2016 ರ ಬಳಿಕ ಎಸಿಬಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಠಾಣೆಗೆ ಸೆ.9-2022 ರ ಬಳಿಕ ಮರಳಿ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರ ದೊರಕಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರವೂ ಲೋಕಾಯುಕ್ತ ಕಚೇರಿಯು ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಮಂಗಳೂರು-ಉಡುಪಿಯ ಜನತೆಯ ಭ್ರಷ್ಟಾಚಾರ ಸಂಬಂಧಿತ ಯಾವುದೇ ಪ್ರಕಾರದ ದೂರುಗಳಿದ್ದಲ್ಲಿ ಕಚೇರಿಗೆ ನೀಡಬಹುದು. ಯಾವುದೇ ಸರಕಾರಿ ಅಧಿಕಾರಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಲ್ಲಿ ಮಾಹಿತಿಯನ್ನು ನೀಡಬಹುದು. ಪಿ.ಸಿ 2ಸಿ ಲೋಕ ನೌಕರ ಕಾಯ್ದೆಯಡಿ ಸರಕಾರದಿಂದ ಭತ್ಯೆ ಮತ್ತು ಸಂಬಳ ತೆಗೆದುಕೊಳ್ಳುವ ಯಾರೇ ಆಗಿದ್ದರೂ ಲಂಚ ತೆಗೆದುಕೊಳ್ಳುತ್ತಿದ್ದಲ್ಲಿ ಅಂತಹವರ ವಿರುದ್ದ ದೂರು ನೀಡಬಹುದು ಎಂದು ಅವರು ಹೇಳಿದರು.

ಮಂಗಳೂರು ವಿಭಾಗದಲ್ಲಿ 2 ಡಿವೈಎಸ್ಪಿ ಹಾಗೂ 1 ಇನ್ಸ್‌ಪೆಕ್ಟರ್ ಹುದ್ದೆ ಇದೆ. 1 ಇನ್ಸ್‌ಪೆಕ್ಟರ್ ಹಾಗೂ 6 ಪಿಸಿಗಳ ಹುದ್ದೆಗಳು ಖಾಲಿ ಉಳಿದಿದೆ. ಉಡುಪಿಯಲ್ಲಿ 1 ಡಿವೈಎಸ್ಪಿ ಹಾಗೂ 1 ಇನ್ಸ್‌ಪೆಕ್ಟರ್ ಗಳಿದ್ದು ಇದರಲ್ಲಿ 1 ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಿದೆ. ಈ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದರು.