ರಾಮಧ್ವಜ ಹಾಕದ ಹಿನ್ನೆಲೆ ಬನ್ನಂಜೆ ನಾರಾಯಣಗುರು ಮಂದಿರದ ವಿರುದ್ದ ನಿಂದನೆ: ದೂರು ದಾಖಲು

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದ ದಿನದಂದು ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ರಾಮಧ್ವಜ ಆಳವಡಿಸದ ಹಿನ್ನಲೆ ಮಂದಿರದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ ಅನಾಮಿಕ ವ್ಯಕ್ತಿ ವಿರುದ್ಧ ಮಂದಿರದ ಆಡಳಿತ ಮಂಡಳಿಯು ದೂರು ನೀಡಿದೆ.

ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆಯ ದಿನ ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ಧ್ವಜ ಹಾಕಿಲ್ಲಎಂದು ಆರೋಪಿಸಿ ಉಡುಪಿ ಬಿಲ್ಲವರ ಸೇವಾ ಸಂಘದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಮಾಡಿರುವ ಕಿಡಿಗೇಡಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಂಘದ ನಿಯೋಗ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರಿಗೆ ಮನವಿ ಸಲ್ಲಿಸಿದೆ.

ಬನ್ನಂಜೆ ನಾರಾಯಣ ಗುರು ಸಂಘ 80 ವರ್ಷದಿಂದ ಸಾಮಾಜಿಕ ಚಟುವಟಿಕೆ ಮಾಡುತ್ತಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿದೆ. ರಾಮಮಂದಿರ ಪ್ರತಿಷ್ಠಾಪನೆ ದಿನ ನಾವು ವಿಶೇಷ ಪೂಜೆ ನೆರವೇರಿಸಿದ್ದೇವೆ. ಆದರೆ ಮಂದಿರದ ಆವರಣದಲ್ಲಿ ಧ್ವಜ ಮಾತ್ರ ಅಳವಡಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಉಡುಪಿ ಎಸ್​ಪಿ ಅರುಣ್​ ಮಾತನಾಡಿ, ಬನ್ನಂಜೆ ನಾರಾಯಣ ಗುರು ಮಂದಿರದ ಆಡಳಿತ ಮಂಡಳಿಯು ಅವಾಚ್ಯ ಶಬ್ದ ಬಳಸಿ ನಿಂದಿಸಿರುವ ಬಗ್ಗೆ ದೂರು ನೀಡಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ದೂರಿನ ಆಧಾರದ ಮೇಲೆ ತಾಂತ್ರಿಕವಾಗಿ ತನಿಖೆ ನಡೆಸುತ್ತೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.