ಉಡುಪಿ: ನಗರ ಠಾಣೆಯಲ್ಲಿ ಭಾರತ್ ಬ್ಯಾಂಕ್ ಉಡುಪಿ ಇದರ ಸಿಬ್ಬಂದಿಗಳು ಹಾಗೂ ಏಜೆಂಟರ ವಿರುದ್ಧ
ಕಾರು ಕಳ್ಳತನದ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ಸದರಿ ಬ್ಯಾಂಕ್ ಮಾಧ್ಯಮಗಳಲ್ಲಿ
ನೀಡಿರುವ ಸ್ಪಷ್ಟೀಕರಣ ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ ಎಂದು ದೂರುದಾರ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಇತ್ತೀಚಿಗೆ ಕೆಲವೊಂದಿಷ್ಟು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಸಾಲ ವಸೂಲಾತಿ ಸಂದರ್ಭದಲ್ಲಿ ತಮ್ಮ ಸಿಬ್ಬಂದಿ ಅಥವಾ ಏಜೆಂಟರ ಹೆಸರಿನಲ್ಲಿ ರೌಡಿಗಳೊಂದಿಗೆ ಸೇರಿ ಕಾನೂನಿಗೆ ವಿರುದ್ಧವಾಗಿ
ದಬ್ಬಾಳಿಕೆ ನಡೆಸುತ್ತಿರುವ ಅನೇಕ ಪ್ರಕರಣಗಳು ಘಟಿಸುತ್ತಿದ್ದು, ಗ್ರಾಹಕರು ಈ ಬಗ್ಗೆ ಅಸಹಾಯಕರಾಗಿ ದಬ್ಬಾಳಿಕೆಗೆ ಒಳಗಾಗಿರುವುದು ಕಂಡು ಬರುತ್ತಿದೆ. ನನ್ನ ಪ್ರಕರಣದಲ್ಲೂ ಇದೇ ರೀತಿ ದಬ್ಬಾಳಿಕೆ ನಡೆಸಲು ಹೊರಟ ಭಾರತ್ ಬ್ಯಾಂಕ್ ವಿರುದ್ಧ ನಾನು ಕಾನೂನಾತ್ಮಕವಾಗಿ ದೂರನ್ನು ನೀಡಿದ್ದು ಇದೀಗ ಈ ಬಗ್ಗೆ ಪ್ರ.ಸ 95/2023ರಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
1. ಯಾವುದೇ ಬ್ಯಾಂಕ್ ಗಳು ಗ್ರಾಹಕರ ವಿರುದ್ಧ ಕ್ರಮ ಜರುಗಿಸುವಾಗ ಕಾನೂನು ಬದ್ಧವಾಗಿಯೇ ನಡೆದುಕೊಳ್ಳಬೇಕು ಹಾಗೂ ಇನ್ನಿತರ ದೌರ್ಜನ್ಯ, ದಬ್ಬಾಳಿಕೆ ನಡೆಸಲು ಅವಕಾಶವಿಲ್ಲ.
2. ಯಾವುದೇ ಬ್ಯಾಂಕ್ ಗಳಿಗೆ ಸಾಲ ವಸೂಲಾತಿಗೆ ಏಜೆಂಟರ ನೇಮಕ ಮಾಡಿಕೊಳ್ಳಲು ಆರ್ ಬಿಐ ನಿಯಮಾವಳಿಗಳಿವೆ. ಈ ರೀತಿ ನಿಯಮಾವಳಿಗಳಿಗೆ ವಿರುದ್ಧವಾಗಿ ಏಜೆಂಟರ ನೇಮಕ ಮಾಡುವುದು ಕೂಡಾ ಕಾನೂನು ಬದ್ಧವಲ್ಲ.
3. ಗ್ರಾಹಕರ ವಿರುದ್ಧ ಸಾಲ ವಸೂಲಾತಿಗೆ ಸರ್ಫೆಸೈ (Securitisation and Reconstruction of Financial Assets and Enforcement of Security Interest Act, 2002) ಕಾಯ್ದೆ ಪ್ರಕಾರವೇ ಬ್ಯಾಂಕ್ ಗಳು ಕ್ರಮ ಜರುಗಿಸಲು ಅವಕಾಶವಿರುವುದು ಮತ್ತು ಹೀಗೆ ಕ್ರಮ ಜರುಗಿಸುವ ಸಂದರ್ಭದಲ್ಲಿ ವ್ಯಕ್ತಿಯ ಸಾಂವಿಧಾನಿಕ ಹಕ್ಕಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕು ಎಂದು ಈಗಾಗಲೇ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯಗಳು ತಮ್ಮ ಹಲವಾರು ತೀರ್ಪಿನಲ್ಲಿ ತಿಳಿಸಿರುತ್ತವೆ.
ನನ್ನ ಈ ಪ್ರಕರಣದಲ್ಲಿ ಭಾರತ್ ಬ್ಯಾಂಕ್ ಉಡುಪಿ ಶಾಖೆಯ ಸಿಬ್ಬಂದಿಗಳು/ಏಜೆಂಟರು ಯಾವುದೇ ಕೋರ್ಟ್ ಆದೇಶವಿಲ್ಲದೇ ಕಾರನ್ನು ಒಯ್ದಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಈ ಬಗ್ಗೆ ನನ್ನ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












