ಮತದಾನ ಜಾಗೃತಿ ಕುರಿತು ಸೋಷಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ರ ಅಂಗವಾಗಿ ಮತದಾನ ಜಾಗೃತಿಯ ಕುರಿತು ಸೋಷಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಆಯೋಜಿಸಲಾಗಿದ್ದು, ಜಿಲ್ಲೆಯ ಆಸಕ್ತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿರುತ್ತದೆ. ಸ್ಪರ್ಧೆಯು ಏಪ್ರಿಲ್ 19 ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮೇ 6 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ರೀಲ್ಸ್ ನ
ಅವಧಿಯು ಕನಿಷ್ಠ 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗೆ ಇರಬೇಕು. ಒಬ್ಬ ಸ್ಪರ್ಧಿಗೆ ಒಂದು ರೀಲ್ಸಿಗೆ ಮಾತ್ರ ಅವಕಾಶವಿದ್ದು, ರೀಲ್ಸ್ ಅನ್ನು ಕನ್ನಡ, ತುಳು ಹಾಗೂ ಆಂಗ್ಲಭಾಷೆಗಳಲ್ಲಿ ರಚಿಸಬಹುದಾಗಿದೆ.

ರೀಲ್ಸ್ ನ ವಿಷಯವು ಮತದಾರರಿಗೆ ಮತದಾನ ಕುರಿತು ಅರಿವು ಹಾಗೂ ಪ್ರೇರಣೆ ಮೂಡಿಸುವಂತಿರಬೇಕು. ರೀಲ್ಸ್ ಮಾಡುವಾಗ ಯಾವುದೇ ರಾಜಕೀಯ ವ್ಯಕ್ತಿ, ಪಕ್ಷ, ಚಿಹ್ನೆ, ಅಭ್ಯರ್ಥಿಯ ವಿಷಯ ಹಾಗೂ ದೃಶ್ಯವನ್ನು ಒಳಗೊಂಡಿರಬಾರದು. ರೀಲ್ಸ್ ನಲ್ಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ತೋರಿಸಬಾರದು. ಸಂಭಾಷಣೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ರೀಲ್ಸ್ಗಳನ್ನು ಮಾಡಬೇಕು.
ರೀಲ್ಸ್ನ ಯಾವ ಭಾಗದಲ್ಲಿಯೂ (ಆರಂಭ, ಮಧ್ಯ, ಅಂತ್ಯ ಅಥವಾ ಯಾವುದೇ ಅವಧಿಯಲ್ಲಿಯೂ) ಜಿಲ್ಲಾಡಳಿತ, ಸ್ವೀಪ್ ಸಮಿತಿ, ಉಡುಪಿ ಜಿಲ್ಲೆ ಇತ್ಯಾದಿಯಾಗಿ ಸಂಸ್ಥೆಯ ಹೆಸರು, ಲೇಬಲ್, ಟೆಂಪ್ಲೇಟ್ ಹಾಗೂ ಬ್ಯಾನರ್ ಇತ್ಯಾದಿಗಳನ್ನು ಕಡ್ಡಾಯವಾಗಿ ಹಾಕಬಾರದು. ಆದರೆ, “ಚುನಾವಣಾ ಪರ್ವ, ದೇಶದ ಗರ್ವ” ಎಂಬ ಚುನಾವಣಾ ಘೋಷಣಾ ವಾಕ್ಯವನ್ನು ರೀಲ್ಸಿನ ಅಂತ್ಯದಲ್ಲಿ ಕಡ್ಡಾಯವಾಗಿ ಹಾಕಿರಬೇಕು.

ವೀಡಿಯೋ ಹಾಗೂ ಧ್ವನಿ ಉತ್ತಮವಾಗಿರಬೇಕು. ವಿಷಯಕ್ಕೆ ತಕ್ಕಂತೆ ವೇಷಭೂಷಣವಿರಬೇಕು. ಮಾತುಗಳು ಸಕಾರಾತ್ಮಕವಾಗಿ, ಮತದಾನದ ಅರಿವು ಮತ್ತು ಜಾಗೃತಿ ನೀಡುವಂತಿರಬೇಕು. ಕಲಾವಿದರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು.

ಸ್ಪರ್ಧಾಳುಗಳು ರೀಲ್ಸ್ ಅನ್ನು ನಿರ್ಮಿಸಿದ ನಂತರ ಆ ರೀಲ್ಸ್ ಅನ್ನು ಏಪ್ರಿಲ್ 19 ರಂದು ಬೆಳಗ್ಗೆ 10 ಗಂಟೆಯ ನಂತರ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಗಳಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಇನ್ಟಾಗ್ರಾಮ್ ಗೆ ಅಪ್‌ಲೋಡ್ ಮಾಡುವಾಗ https://www.instagram.com/swacchaudupi ಅನ್ನು, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವಾಗ https://www.facebook.com/udupizp ಅನ್ನು ಹಾಗೂ ಟ್ವಿಟ್ಟರ್ ಗೆ ಅಪ್‌ಲೋಡ್ ಮಾಡುವಾಗ https://twitter.com/ZPUdupi ಅನ್ನು ಟ್ಯಾಗ್ ಮಾಡಿರಬೇಕು. ನಂತರ ಮೇ 6 ರ ಸಂಜೆ 5
ಗಂಟೆಯವರೆಗೆ ಇನ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಗಳಲ್ಲಿ ಯಾವ ರೀಲ್ಸ್ ಅನ್ನು ಅತೀ ಹೆಚ್ಚು ವೀಕ್ಷಕರು ಲೈಕ್ ಎಂಡ್ ಶೇರ್ ಮಾಡಿರುತ್ತಾರೋ ಆ ವೀಡಿಯೋಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ವಿಜೇತರನ್ನು ಆಯ್ಕೆ ಮಾಡಲಾಗುವುದು.

ರೀಲ್ಸ್ಗಳು ಸ್ವಂತದ್ದಾಗಿರಬೇಕು. ನಕಲು ರೀಲ್ಸ್ಗಳನ್ನು ಸಲ್ಲಿಸುವಂತಿಲ್ಲ. ಕಾಪಿರೈಟ್ ಆಕ್ಟ್ ಉಲ್ಲಂಘನೆ ಆಗುವಂತಹ ಹಿನ್ನೆಲೆ ಸಂಗೀತ ಸೇರಿದಂತೆ ಇನ್ನಿತರ ಆಡಿಯೋ ಅಥವಾ ವಿಡಿಯೋ ಅಳವಡಿಸಿರುವ ರೀಲ್ಸ್ಗಳನ್ನು ಪರಿಗಣಿಸಲಾಗುವುದಿಲ್ಲ.

ಸ್ಪರ್ಧೆಗಾಗಿ ಕಳುಹಿಸಲಾದ ರೀಲ್ಸ್ಗಳನ್ನು ಜಿಲ್ಲಾ ಸ್ವೀಪ್ ಸಮಿತಿಯು ಮತದಾನದ ಜಾಗೃತಿಯ ಉದ್ದೇಶಕ್ಕೆ ಬಳಸುವ ಹಕ್ಕನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸ್ವೀಪ್ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.