ಉದ್ಯಾವರ: ಉದ್ಯಮಿಗಳ ಒಣ ಪ್ರತಿಷ್ಠೆಗೆ ಹೈರಾಣಾದ ಸ್ಥಳೀಯ ಜನತೆ ರಸ್ತೆ ಅವಾಂತರದಿಂದ ಬದುಕು ನರಕ

ಉದ್ಯಾವರ: ಉಳಿದೆಲ್ಲಾ ಕಡೆ ಮಳೆಯಿಂದಾಗಿ ರಸ್ತೆ ಸಮಸ್ಯೆಗಳುಂಟಾಗಿದ್ದರೆ, ಉದ್ಯಾವರದ ಜನರಿಗೆ ಮಾತ್ರ ಮಳೆಗಾಲ ಆರಂಭಕ್ಕೂ ಮೊದಲೆ ರಸ್ತೆ ಸಮಸ್ಯೆ ಎದುರಾಗಿತ್ತು. ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ಹೊಂಡ ಗುಂಡಗಳಿಂದ ತಪ್ಪಿಸಿಕೊಂಡು ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸಲಾಗುತ್ತಿತ್ತು. ಈ ಬಗ್ಗೆ ಜನಪ್ರತಿನಿಧಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿಮೆಂಟ್ ಮಣ್ಣನ್ನು ರಸ್ತೆಗೆ ಹಾಕಲಾಯಿತು. ಇದೀಗ ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ರಸ್ತೆಗೆ ಹಾಕಲಾದ ಸಿಮೆಂಟ್ ಕೊಚ್ಚಿಕೊಂಡು ಹೋಗಿ ರಸ್ತೆ ಯಾವುದು ಹೊಂಡ ಯಾವುದು ಎಂದು ಗೊತ್ತಾಗದ ಪರಿಸ್ಥಿತಿ ಉದ್ಭವವಾಗಿದೆ.

ಉದ್ಯಮಿಗಳ ಒಣ ಪ್ರತಿಷ್ಠೆ

ಉದ್ಯಮಿಗಳ ಪ್ರತಿಷ್ಠೆಯಿಂದಾಗಿ ರಸ್ತೆಯ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬಂದಿದೆ. ಹೊಸ ಕಂಪೆನಿಗೆ ಮೆಶಿನ್ ತರುವಾಗ ಅಡಚಣೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಹಳೆಯ ಕಂಪೆನಿಗಳು ರಸ್ತೆಯನ್ನು ನಿಧಾನ ಗತಿಯಲ್ಲಿ ದುರಸ್ತಿ ಮಾಡಬೇಕೆಂದು ತಾಕೀತು ಮಾಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಜಾಣ ಕುರುಡು ಪ್ರದರ್ಶಿಸುತ್ತಿರುವ ಪಂಚಾಯತ್ ಸದಸ್ಯರು

ಉದ್ಯಾವರ ಪಂಚಾಯತ್ ನ ಮುಂಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಪಂಚಾಯತ್ ಸದಸ್ಯರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಪಂಚಾಯತ್ ಅಧ್ಯಕ್ಷರ ಸಹಿತ ಸದಸ್ಯರು ಕೂಡಾ ನಿತ್ಯ ಅದೇ ದಾರಿಯಲ್ಲಿ ಸಂಚಾರ ಮಾಡುತ್ತಿದ್ದರೂ ಕಾಮಗಾರಿಗೆ ವೇಗ ನೀಡಲು ಇಲ್ಲಿಯವರೆಗೆ ಒಂದೇ ಒಂದು ಹೇಳಿಕೆಯನ್ನೂ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಉದ್ಯಮಿಗಳ ಒಣ ಪ್ರತಿಷ್ಠೆಯಿಂದ ಜನರು ಹೈರಾಣಾಗಿದ್ದು. ಆಡಳಿತ ಇನ್ನಾದರೂ ಎಚ್ವೆತ್ತುಕೊಂಡು ರಸ್ತೆ ದುರಸ್ತಿಗೆ ವೇಗ ನೀಡಲಿ ಎಂಬುವುದು ಜನರ ಆಶಯ.