ಕುಂದಾಪುರ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಭಾನುವಾರ ನೂತನ ಹೊಸಾಡು ಸೇವಾ ಸಹಕಾರ ಸಂಘ ಶುಭಾರಂಭಗೊಂಡಿತು.
ಸಂಘವನ್ನು ಉದ್ಘಾಟಿಸಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಸಂಘದ ಮೂಲಕ ಸರ್ಕಾರದ ವಿವಿಧ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಬಲ ತುಂಬುವ ಕೆಲಸ ಸಹಕಾರಿ ಸಂಘಗಳ ಮೂಲಕ ಆಗುತ್ತಿದೆ. ಇದೀಗ ಸಹಕಾರಿ ರಂಗವು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿದೆ. ಅದರಲ್ಲಿ ಗ್ರಾಮೀಣ ಜನತೆಯ ಕೊಡುಗೆ ಅಪಾರವಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 673 ಸಹಕಾರಿ ಸಂಸ್ಥೆಗಳಿದ್ದು, 4000 ಕೋಟಿ ರೂ.ಠೇವಣಿ ಸಂಗ್ರಹವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸವಾಲುಗಳ ಮಧ್ಯೆ ಸಹಕಾರಿ ರಂಗವು ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.
ಹೊಸಾಡು ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಾಡೇರಿ ಮನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಉಪ ವಿಭಾಗ ಅರುಣ್ ಕುಮಾರ್ ಎಸ್.ವಿ ಶುಭ ಹಾರೈಸಿದರು. ಮಂಜಯ್ಯ ಶೆಟ್ಟಿ ಜಾಜಿಮಕ್ಕಿ ಲಾಕರ್ ಅನ್ನು ಹಾಗೂ ಕೃಷ್ಣ ನಾಯ್ಕ್ ಗಣಕಯಂತ್ರವನ್ನು ಉದ್ಘಾಟಿಸಿದರು. ಎಚ್.ವಿಶ್ವೇಶ್ವರ ಅಡಿಗ, ಶೇಖರ ಶೆಟ್ಟಿ ಕಾಡೇರಿ ಮನೆ, ಕಟ್ಟಡ ಮಾಲೀಕ ಪ್ರದೀಪ್ ಶೆಟ್ಟಿ, ನಿರ್ದೇಶಕರುಗಳಾದ ಸತೀಶ ಶೆಟ್ಟಿ ಯಳೂರು, ಶರತ್ ಕುಮಾರ್ ಶೆಟ್ಟಿ, ಪ್ರದೀಪ ಬಿಲ್ಲವ, ಚಂದ್ರಶೇಖರ, ದಿನೇಶ್ ಜೋಗಿ, ಶಶಿಧರ ಅಡಿಗ, ರಾಮ ಗಾಣಿಗ, ನವೀನ ಎಸ್ ಫೆರ್ನಾಂಡಿಸ್, ಅಕ್ಷತಾ ರವೀಂದ್ರ, ಸರಫರು ಪ್ರದೀಪ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕಿ ರೇಖಾ ಪುತ್ರನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವಂದಿಸಿದರು.