ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ: ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಅಗರಿ ಪ್ರಶಸ್ತಿ

ಸುರತ್ಕಲ್: ಯಕ್ಷಗಾನದಲ್ಲಿ ಕಾಲಮಿತಿ ಅಳವಡಿಕೆ ನಿಟ್ಟಿನಲ್ಲಿ ಹೊಸ ಪ್ರಯೋಗ ಅನಿವಾರ್ಯವಾದ ಕಾರಣ ಅದನ್ನು ಧರ್ಮಸ್ಥಳ ಮೇಳದಲ್ಲಿ ಜಾರಿಗೆ ತರಲಾಗಿದೆ. ಇದು ಬಳಿಕ ಇತರ ಮೇಳಗಳಲ್ಲಿಯೂ ಆರಂಭವಾಗಿದೆ. ಮೇಳದ ಯಜಮಾನನ ಮಿತಿ ಬಿಟ್ಟು ಚೌಕಿಯಲ್ಲಿ ಕಲಾವಿದರೊಂದಿಗೆ ತಾನು ಬೆರೆತ ಕಾರಣ ಮೇಳ ಯಶಸ್ಸು ಕಂಡಿದೆ. ಯಕ್ಷಗಾನ ಕಲಾವಿದರು ತ್ಯಾಗ ಜೀವಿಗಳಾಗಿದ್ದು, ಅವರಿಗೆ ಕಲೆಯೇ ತಪಸ್ಸಾಗಿದೆ. ಕಲಾವಿದರೇ ತನಗೆ ಆಸ್ತಿಯಾಗಿದ್ದಾರೆ. ಯಕ್ಷಗಾನ ಕಲಾವಿದರಿಗೆ ವೇಷ ನಿಗದಿಯನ್ನು ಅಭಿಮಾನಿಗಳು ನಿಗದಿಪಡಿಸುವುದು ಸರಿಯಲ್ಲ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಶನಿವಾರ ನಡೆದ ಸುರತ್ಕಲ್ ಗೋವಿಂದದಾಸ ಕಾಲೇಜಿನ ವೇದಿಕೆಯಲ್ಲಿ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ವತಿಯಿಂದ ನೀಡಲಾಗುವ 2023ನೇ ಸಾಲಿನ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅಗರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಅವರು “ತನಗೆ ನೀಡಿದ ಸನ್ಮಾನವನ್ನು ಕೊಡುಗೆ ಗೌರವದಿಂದ ಸ್ವೀಕರಿಸಿದ್ದೇನೆ. ಮೇಳದ ಯಜಮಾನನಾಗಿ ತನ್ನ ಕರ್ತವ್ಯ ಮಾಡುತ್ತಿದ್ದೇನೆ. ಅಗರಿ ಭಾಗವತರ ಬಳಿಕ ಕಡತೋಕ ಶೈಲಿ, ಮಯ್ಯ ಶೈಲಿ, ಹೆಬ್ಬಾರ್ ಶೈಲಿ ಬಂದಿವೆ. ಕಾಳಿಂಗ ನಾವಡರಂಥವರು ಬಡಗು ಶೈಲಿಗೆ ಜೀವಕಳೆ ನೀಡಿದ್ದರು. ಇದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಶೈಲಿ ಯಕ್ಷಗಾನಕ್ಕೆ ಬರುವುದು ಬೇಡ,”ಎಂದರು.

ಅಗರಿ ಶೈಲಿ ಪ್ರಶಸ್ತಿಯನ್ನು ಗೆಜ್ಜೆಗಿರಿ ಮೇಳದ ಗಿರೀಶ್ ರೈ ಕಕ್ಕೆ ಪದವು, ಅಗರಿ ವಿಶೇಷ ಸನ್ಮಾನವನ್ನು ಕಟೀಲು ಮೇಳದ ಡಾ. ವಾದಿರಾಜ ಕಲ್ಲೂರಾಯ ಅವರಿಗೆ ಪ್ರದಾನ ಮಾಡಲಾಯಿತು. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅಧ್ಯಕ್ಷತೆ ವಹಿಸಿ “ಅಗರಿ ಭಾಗವತರು ಯಕ್ಷಗಾನಕ್ಕೆ ನೀಡಿದ ಕೊಡುಗೆ ದೊಡ್ಡದು,” ಎಂದು ಸ್ಮರಿಸಿದರು.

ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅಗರಿ ಸಂಸ್ಮರಣೆ ನಡೆಸಿ, “ಅಗರಿ ಶ್ರೀನಿವಾಸ ಭಾಗವತರಿಗೆ ಸುಮಾರು 100 ಪ್ರಸಂಗಗಳು ಬಾಯಿ ಪಾಠವಿದ್ದು ಪಾರ್ತಿಸುಬ್ಬನ ಬಳಿಕ ಅವರು ಅತ್ಯಧಿಕ ಪ್ರದರ್ಶನ ಕಂಡಿದ್ದ ಪ್ರಸಂಗ ನೀಡಿದ್ದರು. ಅಗರಿ ಶ್ರೀನಿವಾಸ ಭಾಗವತರು ಸಿದ್ಧಿ, ಪ್ರಸಿದ್ಧಿಯಿಂದ ರಂಗವನ್ನಾಳಿದ್ದರೂ ಅವರಲ್ಲಿ ಅಹಮಿಕೆ ಇರಲಿಲ್ಲ, ತಂದೆ ಅಗರಿ ಶ್ರೀನಿವಾಸ ಭಾಗವತ, ಅವರ ಪುತ್ರ ಅಗರಿ ರಘು ರಾಮ ಭಾಗವತರ ಶೈಲಿಯ ಪ್ರಸಿದ್ಧಿಗಾಗಿ ಮೂರನೇ ತಲೆಮಾರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇನ್ನಷ್ಟು ವಿಸ್ತಾರವಾಗಿ ನಡೆಯಬೇಕು,” ಎಂದರು.

ಡಿ. ಹರ್ಷೇಂದ್ರ ಕುಮಾರ್ ಅಭಿನಂದನಾ ಭಾಷಣ ಮಾಡಿದ ಡಾ. ಜೋಷಿ, “ರಜಾ ಕಾಲದ ಸಂಬಳ, ಪಿಎಫ್ ಇತ್ಯಾದಿ ಮೊದಲಿಗೆ ಧರ್ಮಸ್ಥಳ ಮೇಳ ಆರಂಭಿಸಿತ್ತು. ಧಾರ್ಮಿಕ ಕ್ಷೇತ್ರ, ಯಕ್ಷಗಾನ ಆಡಳಿತದಲ್ಲಿ ಧರ್ಮಸ್ಥಳ ರೋಲ್ ಮಾಡೆಲ್,” ಎಂದರು.

ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಕಾರ್ಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್ ಮಾತನಾಡಿ, “ಅಜ್ಜ, ತಂದೆಯ ಭಾಗವತಿಕೆ ಶೈಲಿ ಉಳಿಸಿ ಯಕ್ಷಗಾನಕ್ಕೆ ಸೇವೆ ಸಲ್ಲಿಸಲು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ಅಗರಿ ಶ್ರೀನಿವಾಸ ಭಾಗವತರು ಬರೆದಿದ್ದ ಶ್ರೀದೇವಿ ಮಹಾತ್ಮೆ ಪ್ರಸಂಗ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು, ಇದು ಗಿನ್ನಿಸ್ ದಾಖಲೆಗೆ ಸೇರಿದೆ. ಗಿನ್ನಿಸ್ ಗೆ ಸೇರಿರುವ ಸಂಕಲ್ಪ ತಮ್ಮದಾಗಿದೆ,” ಎಂದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್, ಉದ್ಯಮಿ ಶ್ರೀಪತಿ ಭಟ್, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಪಿ. ಕೃಷ್ಣಮೂರ್ತಿ, ಅಗರಿ ವಾದಿರಾಜ ರಾವ್, ಅಗರಿ ಶ್ರೀನಿವಾಸ ರಾವ್, ಅಗರಿ ದಿನೇಶ್ ರಾವ್, ಶೇಷಶಯನ, ಕಿರಣ್ ರಾವ್ ಮತ್ತಿತರು ಉಪಸ್ಥಿತಾರಿದ್ದರು. ಕೃಷ್ಣಪ್ರಸಾದ್ ಉಳಿತ್ತಾಯ ಕಾರ್ಯಕ್ರಮ ನಿರೂಪಿಸಿದರು.