ನವದೆಹಲಿ: ಅರಬ್ಬಿ ಸಮುದ್ರದ ಉತ್ತರ ಭಾಗದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಹಾಗೂ ಪಾಕಿಸ್ತಾನ ನೌಕಾಪಡೆಯ ಹಡಗಿನ ನಡುವೆ ಮಂಗಳವಾರ ಸಂಜೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಭಾರತೀಯ ನೌಕೆ ನಿಯಮಿತ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಪಾಕಿಸ್ತಾನ ನೌಕಾಪಡೆಯ ಹಡಗು ಅತಿ ವೇಗದಲ್ಲಿ ಚಲಿಸಿದ ಪರಿಣಾಮ ಡಿಕ್ಕಿ ಸಂಭವಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಯಾವುದೇ ಪ್ರಮುಖ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ನವದೆಹಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಪಾಕಿಸ್ತಾನ ನೌಕಾಪಡೆಯ ಹಡಗಿನ ಅಸುರಕ್ಷಿತ ಹಾಗೂ ವೃತ್ತಿಪರವಲ್ಲದ ನಡೆ 1991ರ ಏಪ್ರಿಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟ ಸೇನಾ ಸಮರಾಭ್ಯಾಸಗಳು ಹಾಗೂ ಚಲನವಲನಗಳ ಮುನ್ಸೂಚನೆ ಒಪ್ಪಂದದ 10ನೇ ವಿಧದ ಉಲ್ಲಂಘನೆಯಾಗಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಪಾಕಿಸ್ತಾನದ ಎಲ್ಲಾ ಸೇನಾ ಪಡೆಗಳು ಅಗತ್ಯ ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದೆ.















