ಬೆಂಗಳೂರು: ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ನವಿಲು ಗರಿಗೆ ವಿನಾಯಿತಿ ಇದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನವಿಲು ಗರಿಯಿಂದ ತಯಾರಿಸಿದ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡಲು ನಿಷೇಧವಿದೆ. ಆದರೆ ನವಿಲುಗಳಿಗೆ ಹಿಂಸೆ ನೀಡದೇ ಉದುರಿಬಿದ್ದ ಗರಿಗಳನ್ನು ಸಂಗ್ರಹಿಸಿ ದೇಶದೊಳಗೆ ಮಾರಾಟ ಮಾಡುವುದು ಕಾನೂನು ಬಾಹಿರವಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕೇವಲ ಹಿಂದೂ ಸಮಾಜದ ನಂಬಿಕೆಗಳನ್ನು ಗುರಿಯಾಗಿಸಿಕೊಂಡು ಕಾನೂನು ಕ್ರಮ ಜರುಗಿಸುವುದು ಸರಿಯಾದ ಕ್ರಮವಲ್ಲ, ದರ್ಗಾಗಳಲ್ಲಿ ನವಿಲುಗರಿ ಇಡುವ ಬಗ್ಗೆಯೂ ತನಿಖೆ ನಡೆಯಬೇಕು. ಸತ್ತ ಪ್ರಾಣಿಗಳ ಚರ್ಮವನ್ನು ಸಾಧುಸಂತರು ಅನಾದಿಕಾಲದಿಂದಲೂ ಬಳಸುತ್ತಿರುವುದು ಪರಂಪರೆ, ಕಾನೂನು ಪಾಲಿಸಿದರೆ ಎಲ್ಲರಿಗೂ ಅನ್ವಯವಾಗುವಂತೆ ಪಾಲಿಸಬೇಕು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಲಾಗುವುದು. ಹುಲಿ ಉಗುರು ಧರಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಿದರೆ ದರ್ಗಾದಲ್ಲಿ ನವಿಲು ಗರಿ ಬಳಸುವವರ ಬಗ್ಗೆಯೂ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಶುಕ್ರವಾರ ಆಗ್ರಹಿಸಿದ್ದರು.
ಹುಲಿ ಉಗುರಿನ ಲಾಕೆಟ್ ಗಳನ್ನು ಅರಣ್ಯಾಧಿಕಾರಿಗಳು ಧರಿಸಿದ್ದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.












