ಹಾಸನ: ಶಕ್ತಿದೇವತೆಹಾಸನಾಂಬೆಯ ಪ್ರಸಕ್ತ ಸಾಲಿನ ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ಮಧ್ಯಾಹ್ನ 12.23ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚುವ ಮೂಲಕ ಈ ಬಾರಿಯ ದರ್ಶನಕ್ಕೆ ತೆರೆ ಎಳೆಯಲಾಗಿದೆ.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಹೆಚ್ ಪಿ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು.
ಹಾಸನದ ಹಾಸನಾಂಬೆ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿದ್ದು ಉತ್ಸವಕ್ಕೆ ಬುಧವಾರ ವಿದ್ಯುಕ್ತವಾಗಿ ತೆರೆ ಕಂಡಿತು.
1 ಸಾವಿರ ಟಿಕೆಟ್ ಮಾರಾಟದಿಂದ 3,09,89,000 ರೂಪಾಯಿ ಆದಾಯ ಸಂಗ್ರಹವಾದರೆ, 300 ರೂ. ಟಿಕೆಟ್ ಮಾರಾಟದಲ್ಲಿ 2,35,04,400 ರೂಪಾಯಿ ಆದಾಯ ಬಂದಿದೆ. ಇನ್ನು ಲಡ್ಡು ಪ್ರಸಾದ ಮಾರಾಟದಿಂದ 68,28,760 ರೂಪಾಯಿ ಆದಾಯ ಬಂದಿದೆ. ಒಟ್ಟು 6,13,17,160 (ಆರು ಕೋಟಿ ಹದಿಮೂರು ಲಕ್ಷದ ಹದಿನೇಳನೂರ ಅರವತ್ತು) ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ದಾಖಲೆ ಬರೆದ ಹಾಸನಾಂಬೆ: ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಪಡೆದಿರು. ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದ್ದರಿಂದ ದೇವಾಲಯಕ್ಕೆ ಈ ವರ್ಷ 6 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಮಂಗಳವಾರ ಮಧ್ಯಾಹ್ನ 5 ಗಂಟೆವರೆಗೆ ನೇರ ದರ್ಶನದ ಟಿಕೆಟ್‌ಗಳ ಮಾರಾಟ ಮತ್ತು ಲಾಡು ಪ್ರಸಾದದ ಮಾರಾಟದಿಂದಲೇ ದಾಖಲೆ ಪಟ್ಟದ ಆದಾಯ ಬಂದಿದೆ.
ಇನ್ನು ಮುಂದಿನ ವರ್ಷ 11 ದಿನಗಳ ಕಾಲ ದೇವಿ ದರ್ಶನ ನೀಡಲಿದ್ದು, ಒಂಬತ್ತು ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. 2024ರ ಅಕ್ಟೋಬರ್ 24 ರಿಂದ ನವೆಂಬರ್ 3ರ ತನಕ ಹಾಸನಾಂಬೆಯ ದೇಗುಲ ಬಾಗಿಲು ತೆರೆಯಲಿದೆ.ನಿನ್ನೆ ಮಧ್ಯಾಹ್ನದ ವೇಳೆಗೆ ದೇವಾಲಯದತ್ತ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ನೂಕು ನುಗ್ಗಲಿಲ್ಲದೆ ಭಕ್ತರು ಸರಾಗವಾಗಿ ದೇವಿಯ ದರ್ಶನ ಪಡೆದರು. ಆದರೆ, ಇಂದು ಕೊನೆಯ ದಿನ ಮತ್ತು ಸಾರ್ವಜನಿಕರ ದರ್ಶನ ಇಲ್ಲದಿದ್ದರೂ ದರ್ಶನ ಪಡೆಯಲು ದೂರದ ಊರಿನಿಂದ ಬಂದ ಭಕ್ತರಿಗೆ ಕೊನೆಯ ಕ್ಷಣದಲ್ಲಿ ನಿರಾಸೆ ಉಂಟಾಯಿತು. ದರ್ಶನ ಸಿಗದೇ ಸಾಕಷ್ಟು ಮಂದಿ ಭಕ್ತರು ದೇವಿಯ ಗೋಪುರದ ಮುಂಭಾಗದಲ್ಲಿ ಕೈ ಮುಗಿದು ತಮ್ಮ ಭಕ್ತಿ ಸಮರ್ಪಣೆ ಮಾಡಿ ವಾಪಸ್ಸಾದರು.