‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಪಾಂಡ್ಯ, ರಾಹುಲ್‌ಗೆ ₹ 20 ಲಕ್ಷ ದಂಡ

ನವದೆಹಲಿ: ಟಿವಿ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ ಅವರಿಗೆ ಬಿಸಿಸಿಐ ತಲಾ ₹ 20 ಲಕ್ಷ ದಂಡ ವಿಧಿಸಿದೆ.
ಒಂಬುಡ್ಸ್‌ಮನ್ ಡಿ.ಕೆ.ಜೈನ್‌ ಅವರು ಈ ಆದೇಶ ಹೊರಡಿಸಿದ್ದು, ₹ 10 ಲಕ್ಷವನ್ನು ಅರೆ ಸೇನಾಪಡೆಯ ಹುತಾತ್ಮ ಯೋಧರ ಪತ್ನಿಯರ ಕಲ್ಯಾಣಕ್ಕಾಗಿ ನೀಡಬೇಕು. ಉಳಿದ ₹ 10 ಲಕ್ಷವನ್ನು ಅಂಧರ ಕ್ರಿಕೆಟ್‌ ಸಂಸ್ಥೆಯ ನಿಧಿಗೆ ನೀಡಬೇಕು ಎಂದು ಸೂಚಿಸಿದ್ದು,  ನಾಲ್ಕು ವಾರದೊಳಗಾಗಿ ದಂಡ ಪಾವತಿಸಲು ತಿಳಿಸಲಾಗಿದೆ. ಇಲ್ಲವಾದರೆ ಬಿಸಿಸಿಐ ಮುಂದಿನ ಪಂದ್ಯಗಳ ಸಂಭಾವನೆಯಲ್ಲಿ ಭರಿಸಿಕೊಳ್ಳಲಿದೆ ಎಂದು ಜಾಲತಾಣದಲ್ಲಿ ಎಚ್ಚರಿಸಲಾಗಿದೆ.
‘ಆಟಗಾರರು ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗಳು ಸೂಕ್ಷ್ಮವಾಗಿದ್ದು, ಸಭ್ಯತೆಯ ಮಟ್ಟ ಮೀರಿವೆ. ಕ್ರಿಕೆಟಿಗರು ವಿಶೇಷವಾಗಿ ಯುವಜನತೆಯ ಮೇಲೆ ಅಗಾಧ ಪ್ರಭಾವ ಬೀರುತ್ತಾರೆ. ಅಭಿಮಾನಿಗಳು ಕೇವಲ ಅವರ ಆಟವನ್ನು ಮಾತ್ರ ನೋಡುವುದಿಲ್ಲ. ನಡವಳಿಕೆಯನ್ನೂ ಗಮನಿಸುತ್ತಾರೆ ಎಂದಿದ್ದಾರೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಆಟಗಾರರು ಲೈಂಗಿಕತೆ ಕುರಿತು ಮಾತನಾಡಿದ್ದರು.