ನೇತ್ರಾವತಿಯಲ್ಲಿ ಲೀನವಾಯ್ತು “ಕಾಫಿ” ಯ ಪರಿಮಳ:ಕೆಫೆ ಕಾಫಿ ಡೇ ಮಾಲಿಕನ ಶವ ನದಿಯಲ್ಲಿ ಪತ್ತೆ

ಮಂಗಳೂರು: ಕೆಫೆ ಕಾಫಿ ಡೇ ಮಾಲಿಕ, ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ  ಉದ್ಯಮಿ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಇದೀಗ ಅವರ ಸಾವಿನ‌ ಸುದ್ದಿ ದೃಢವಾಗುತ್ತಿದ್ದಂತೆಯೇ ಕುಟುಂಬಸ್ಥರು ಮೌನವಾಗಿದ್ದಾರೆ.ಅವರು ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆ ಕೂಡ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದೆ.

ಸೋಮವಾರ ರಾತ್ರಿ ಸಿದ್ದಾರ್ಥ್​ ನಾಪತ್ತೆಯಾಗಿದ್ದರು. ನೇತ್ರಾವತಿ ನದಿಯಲ್ಲಿ ಸತತ 36 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಬುಧವಾರ ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್​ ಮಂಜುಗಡ್ಡೆ ಸ್ಥಾವರದ ಬಳಿ ಅವರ ಮೃತದೇಹ ಪತ್ತೆಯಾಗಿದೆ.

ಮಂಗಳವಾರ ಬೆಳಗ್ಗೆ ಕರಾವಳಿ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್ ನೇತ್ರಾವತಿ ಸೇತುವೆಯ ಕೆಳಭಾಗ, ನೇತ್ರಾವತಿ ನದಿ, ಅಳಿವೆ ಬಾಗಿಲು ಮುಂತಾದೆಡೆ ಶೋಧಕಾರ್ಯ ನಡೆಸಿದ್ದವು.ನೇತ್ರಾವತಿ ನದಿಯಲ್ಲಿ ಮಳೆಯ ಒರತೆ ಹೆಚ್ಚಾಗಿದ್ದುದರಿಂದ ಕಾರ್ಯಾಚಾರಣೆಗೆ ತೊಡಕಾಗಿತ್ತು.ಆದರೆ ಸತತವಾದ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಮೃತದೇಹ ಪತ್ತೆಯಾಗಿದೆ.