ಮಂಗಳೂರು: ಮಂಗಳೂರು ಪೊಲೀಸರು ನಾಲ್ಕು ಕೋಬ್ರಾ ದ್ವಿಚಕ್ರ ಸಂಚಾರ ಗಸ್ತು ವಾಹನಗಳನ್ನು ಪರಿಚಯಿಸಿದರು. ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿಗೆ ಕ್ರಮವಾಗಿ ಎರಡು ವಾಹನಗಳನ್ನು ಸೇರ್ಪಡೆಗೊಳಿಸಿದರು.
ಮಂಗಳವಾರದಂದು ಕೋಬ್ರಾ ವಾಹನಗಳನ್ನು ಬಿಡುಗಡೆಮಾಡಲಾಯಿತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ಇವು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲಿವೆ. ಈ ವಾಹನಗಳಲ್ಲಿ ಸೈರನ್ ಮತ್ತು ಮೈಕ್ ವ್ಯವಸ್ಥೆ ಇರಲಿದೆ. ಯಾವುದೇ ಟ್ರಾಫಿಕ್ ಸಮಸ್ಯೆ ಅಥವಾ ಅಪಘಾತ ಸಂಭವಿಸಿದಲ್ಲಿ ಈ ವಾಹನಗಳು ತಕ್ಷಣವೇ ಸ್ಥಳಕ್ಕೆ ತೆರಳಲಿವೆ ಎಂದರು.
ನಗರದಲ್ಲಿ ಪಾರ್ಕಿಂಗ್ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ತ್ವರಿತವಾಗಿ ವಾಹನಗಳ ಚಕ್ರಗಳಿಗೆ ಹಿಡಿಕಟ್ಟುಗಳನ್ನು ಹಾಕುವ ಮೂಲಕ ತಕ್ಷಣ ಕ್ರಮ ಕೈಗೊಳ್ಳಲಿದೆ. ಫುಟ್ ಪಾತ್ ಮೇಲೆ ಬೀಡು ಬಿಟ್ಟಿರುವ ಬೀದಿ ವ್ಯಾಪಾರಿಗಳ ಮೇಲೂ ಗಮನಹರಿಸಿ ಫುತ್ ಪಾತ್ ಗಳನ್ನು ಜನರ ಓಡಾಟಕ್ಕೆ ಮುಕ್ತವಾಗಿರಿಸಲಾಗುವುದು. ನಿಗದಿತ ಪ್ರದೇಶಗಳು ಪ್ರಯಾಣಾನುಕೂಲವಾಗಿರಲು ತಂಡಗಳು ನಿರಂತರ ಗಸ್ತಿನಲ್ಲಿರಲಿವೆ. ವಿಐಪಿ ಚಲನವಲನಗಳನ್ನು ನಿರ್ವಹಿಸುವಲ್ಲಿ ಅಥವಾ ಆಂಬ್ಯುಲೆನ್ಸ್ ಚಲನೆಗಾಗಿ ಹಸಿರು ಕಾರಿಡಾರ್ ರಚಿಸಲು ಸಹಾಯ ಮಾಡುವಲ್ಲಿ ಕೋಬ್ರಾಗಳು ಪ್ರಮುಖ ಪಾತ್ರ ವಹಿಸಲಿವೆ. ಹೆಚ್ಚುವರಿ ವಾಹನಗಳು ದೊರಕಿದ ಮೇಲೆ ವ್ಯವಸ್ಥೆಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಜೈನ್ ತಿಳಿಸಿದರು.
ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿಪಿ ದಿನೇಶ್ ಕುಮಾರ್, ಸಂಚಾರ ಉಪವಿಭಾಗದ ಎಸಿಪಿ ಗೀತಾ ಕುಲಕರ್ಣಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.