ಕರಾವಳಿಯ ಮೆಕ್ಯಾನಿಕ್ ಗಳು ದೇಶವ್ಯಾಪಿ ಪ್ರಸಿದ್ಧಿ ಪಡೆದಿದ್ದಾರೆ: ಶಶಿಧರ್ ಪೈ ಮಾರೂರು

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಮತ್ತ್ತು ಉಡುಪಿ ಜಿಲ್ಲೆಗಳ ತಂತ್ರಜ್ಞರ ಅತ್ಯುತ್ತಮ ಗುಣಮಟ್ಟದ ಸೇವೆ ದೇಶವ್ಯಾಪಿ ಪ್ರಚಲಿತವಾಗಿದ್ದು, ಆಟೋಮೊಬೈಲ್ ಕ್ಷೇತ್ರದಲ್ಲಿ ಇಲ್ಲಿನ ಮೆಕ್ಯಾನಿಕ್ ಗಳು ಇಡೀ ದೇಶದಲ್ಲಿಯೇ ಹೆಸರುವಾಸಿಯಾಗಿದ್ದಾರೆ ಎಂದು ಮಂಗಳೂರು ಮಾರೂರು ಗ್ರೂಪ್ ನ ಶಶಿಧರ್ ಪೈ ಅಭಿಮತ ವ್ಯಕ್ತಪಡಿಸಿದರು.

ಅವರು ಭಾನುವಾರ ಮಂಗಳೂರು ಕಡೆಮೊಗರು ನಲ್ಲಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ, ಮಂಗಳೂರು ಮತ್ತು ಉಡುಪಿ ಜಿಲ್ಲೆ ಇದರ 2019-20 ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಮೆಕ್ಯಾನಿಕ್ ಗಳ ಸಮಯ ಪ್ರಜ್ಞೆಯಿಂದ ತೆಗೆದು ಕೊಳ್ಳುವ ನಿರ್ಧಾರಗಳು, ತಾಂತ್ರಿಕ ಸಮಸ್ಯೆಗಳಿಗೆ ಅತ್ಯಂತ ವೇಗವಾಗಿ ನೀಡುವ ಪರಿಹಾರ, ಅತ್ಯುತ್ತಮ ಗುಣಮಟ್ಟದ ಸೇವೆ  ಬೇರೆ ಯಾವ ಭಾಗದಲ್ಲೂ ಕಾಣ  ಸಿಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆ ಹೊಂದಿದ ಸುಮಾರು ನಲವತ್ತು ಗ್ಯಾರೇಜ್ ಮಾಲೀಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ತುಳು ಸಾಹಿತಿ, ಕವಿ ಹಾಗು ಪೂವರಿ ಪತ್ರಿಕೆಯ ಸಂಪಾದಕ ವಿಜಯ ಭಂಡಾರಿ ಹೆಬ್ಬಾರಬೈಲು ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.

ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ  ನಿತಿನ್ ಕುಮಾರ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಗುಣಪಾಲ್ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಯರ್ ಮ್ಯಾನ್ ಎ ಜನಾರ್ಧನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರುಗಳಾದ ಎಂ ರುಕ್ಮಯ್ಯ, ಜಿ ವಸಂತ ಸಾಲಿಯಾನ್, ಪುಂಡಲೀಕ ಸುವರ್ಣ, ದಿವಾಕರ್ ಎಂ, ಉಪಾದ್ಯಕ್ಷರುಗಳಾದ ಮಾಧವ ಬಂಗೇರ, ಉದಯಕಿರಣ್, ಜೊತೆ ಕಾರ್ಯದರ್ಶಿಗಳಾದ ದಿನಕರ್ ಕುಲಾಲ್, ಬಾಲಕೃಷ್ಣ ಶೆಟ್ಟಿ, ರಾಮಚಂದ್ರ ಪಂಡಿತ್, ಪುರುಷೋತ್ತಮ ಕೆ, ಸಂಘಟನಾ ಕಾರ್ಯದರ್ಶಿಗಳಾದ  ದಿನೇಶ್ ಕುಮಾರ್, ದಿನೇಶ್ ಬಂಗೇರ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಮತ್ತು ಯೋಗೀಶ್, ಸಮಿತಿ ಸದಸ್ಯರು, ಎಲ್ಲ ವಲಯಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೃಷ್ಣ ಶ್ರೀಯಾನ್ ವಂದಿಸಿದರು. ಸಭೆಯ ಬಳಿಕ ನೂತನ ವರ್ಷದ ಸಾಲಿನ ದಿನೇಶ್ ಕುಮಾರ್ ನೇತೃತ್ವದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.