ಕಾಂತಾರ ಕಂಡು ಮೆಚ್ಚಿದ ಕರಾವಳಿ ಬೆಡಗಿಯರು: ಅನುಷ್ಕಾ, ಶಿಲ್ಪಾ ಶೆಟ್ಟಿ ಯಿಂದ ರಿಷಭ್ ಗುಣಗಾನ

ಕರಾವಳಿಯ ಬೆಡಗಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೂಲತಃ ಪುತ್ತೂರಿನ ಬೆಳ್ಳಿಪಾಡಿಯವರಾದ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿದ್ದೇನೆ. ರಿಷಭ್ ಮತ್ತು ಸಮಸ್ತ ಕಾಂತಾರ ತಂಡಕ್ಕೆ ಶುಭಾಶಯ ಎಂದಿದ್ದಾರೆ. ನಿಡ್ಡೋಡಿಯ ಮುದಲಾಡಿಯವರಾದ ಶಿಲ್ಪಾ ಶೆಟ್ಟಿ ಕೂಡಾ ಕಾಂತಾರ ಸಿನಿಮಾ ವೀಕ್ಷಿಸಿ, ಎಂತಹ ನಿರೂಪಣೆ, ಭಾವನೆ, ಕಂಪನ ಮತ್ತು ಜಗತ್ತು. ಕ್ಲೈಮ್ಯಾಕ್ಸ್ ಸಮಯದಲ್ಲಿ ಮೈರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿಯು ವೀಕ್ಷಕನನ್ನು ಈ ಜಗತ್ತಿಗೆ ಸಾಗಿಸುತ್ತದೆ. ನಾನು ಸೇರಿದ ಜಗತ್ತು, ನಿಜವಾಗಿಯೂ ನನ್ನನ್ನು ನನ್ನ ಬೇರುಗಳಿಗೆ ಕರೆದೊಯ್ಯಿತು. ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ, ಪ್ರದರ್ಶನಗಳು, ಹೃದಯ, ನಂಬಿಕೆ ಮತ್ತು ನಿರ್ದೇಶನದ ಸಂಪೂರ್ಣ ತೇಜಸ್ಸಿಗಾಗಿ ಇದನ್ನು ನೋಡಲೇಬೇಕು. ರಿಷಭ್ ನಿಮ್ಮ ದೃಢ ನಿರ್ಧಾರಕ್ಕೆ ಮತ್ತು ಬಹುಮುಖತೆಗೆ ಹ್ಯಾಟ್ಸ್ ಆಫ್, ಈ ಯೋಜನೆಯಲ್ಲಿ ನೀವು ಅನೇಕ ಟೋಪಿಗಳನ್ನು ಧರಿಸಿದ್ದೀರಿ ಮತ್ತು ಅದಕ್ಕೆ ಗರಿಗಳನ್ನು ಕೂಡ ಸೇರಿಸಿದ್ದೀರಿ. ಯಶಸ್ಸನ್ನು ಆನಂದಿಸಿ ಎಂದು ಟ್ವೀಟಿಸಿದ್ದಾರೆ.

ಅನುಷ್ಕಾ ಶೆಟ್ಟಿ, ಸುನೀಲ್ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ತಮ್ಮ ಮೂಲದ ಮನೆಗಳಿಗೆ ಭೇಟಿ ನೀಡುವುದು ಹಲವು ಬಾರಿ ಕಂಡುಬಂದಿದೆ. ಕಾಂತಾರ ವೀಕ್ಷಿಸಿದ ಬಳಿಕ ಬಹುತೇಕ ಮಂದಿ ತಮ್ಮ ಕುಟುಂಬದ ಮನೆಗಳಿಗೆ ಮರಳುವುದು ನಿಶ್ಚಿತ.

ದೇಶ ಪರದೇಶಗಳಲ್ಲಿರುವ ತುಳುವರಿಗೆ ತಮ್ಮ ಬೇರುಗಳು ತುಳುನಾಡಿನಲ್ಲಿದೆ ಎಂದು ನೆನಪಿಸಿಕೊಡುತ್ತಿರುವ ಕಾಂತಾರ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಆಧುನಿಕತೆಯ ಭರಾಟೆಯಲ್ಲಿ ತಮ್ಮ ಮೂಲದ ಬೇರುಗಳಿಂದ ದೂರವಾಗಿದ್ದವರೆಲ್ಲರೂ ಇಂದು ತಮ್ಮ ಕುಟುಂಬದ ಮೂಲ ದೈವಗಳನ್ನು ನೆನೆಯುತ್ತಿದ್ದಾರೆ ಮಾತ್ರವಲ್ಲ, ತಮ್ಮ ಮನೆತನಗಳಿಗೆ ಹಿಂತಿರುಗುವ ಮನಸ್ಸು ಮಾಡಿದ್ದಾರೆ. ದೈವ-ಕೋಲವನ್ನು ಉದಾಸೀನ ಭಾವನೆಯಿಂದ ನೋಡುತ್ತಿದ್ದ ಆಧುನಿಕ ಪೀಳಿಗೆಯ ಯುವ ಜನತೆಯೂ ಇಂದು ದೈವಾರಾಧನೆಯ ಮಹತ್ವವನ್ನು ಅರಿತು ತಮ್ಮ ಬೇರುಗಳಿಗೆ ಹಿಂತಿರುಗುತ್ತಿರುವುದು ಕೇವಲ ಒಂದು ಸಿನಿಮಾದಿಂದ ಎಂದರೆ ನಂಬಲು ಕಷ್ಟವಾದರೂ ಇದು ಸತ್ಯ. ಇದು ತುಳುನಾಡಿನ ದೈವ-ಭೂತಗಳ ಕಾರಣಿಕದ ಫಲವಲ್ಲದೆ ಬೇರೇನಲ್ಲ.