ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆ ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆಯಲ್ಲಿ ನಗರದ ಅಮ್ಮಣ್ಣಿರಾಮಣ್ಣ ಸಭಾಭವನದಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆ ಉದ್ಘಾಟಿಸಿ ಸಂಜೀವ ಕಾಂಚನ್ ಮಾತನಾಡಿ, ಬಡಗಬೆಟ್ಟು ಸೊಸೈಟಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಜ್ಯದಲ್ಲಿಯೇ ಮಾದರಿ ಸಹಕಾರಿ ಸಂಘವಾಗಿ ರೂಪುಗೊಂಡಿದೆ ಎಂದರು.
₹9.12 ಕೋ. ಲಾಭ: ಜಯಕರ ಶೆಟ್ಟಿ
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು.
ವರದಿ ಸಾಲಿನ ಅಂತ್ಯಕ್ಕೆ ಸಂಘ ಒಟ್ಟು 17,501 ಸದಸ್ಯರಿಂದ 4.35 ಕೋಟಿ ರೂ. ಪಾಲು ಬಂಡವಾಳ ಹಾಗೂ 350.33 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 255.46 ಕೋ. ರೂ. ಹೊರ ಬಾಕಿ ಸಾಲ ಇದೆ. ವರದಿ ಸಾಲಿನಲ್ಲಿ ಸಂಘ 9.12 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು. ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ. 15ರಷ್ಟು ಡಿವಿಡೆಂಡ್ ಘೋಷಿಸಿದರು.
ಸನ್ಮಾನ:
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಸಿ. ಬಂಗೇರ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜನಾರ್ದನ ಕೊಡವೂರು ಹಾಗೂ ಸಂಘದಲ್ಲಿ 19 ವರ್ಷ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಹಿರಿಯ ಗುಮಾಸ್ತರಾಗಿ ನಿವೃತ್ತರಾದ ಆನಂದ ಬಿ. ಅವರನ್ನು ಗೌರವಿಸಲಾಯಿತು
ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ, ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ. ಕಾಮತ್, ವಿನಯ ಕುಮಾರ್ ಟಿ. ಎ., ಜಯಾನಂದ ಸಿ. ಮೈಂದನ್, ಪದ್ಮನಾಭ ಕೆ. ನಾಯಕ್, ರಘುರಾಮ ಎಸ್. ಶೆಟ್ಟಿ, ಜಾರ್ಜ್ ಸಾಮ್ಯುವೆಲ್, ಸದಾಶಿವ ನಾಯ್ಕ್, ಜಯಾ ಶೆಟ್ಟಿ ಮತ್ತು ಗಾಯತ್ರ್ರಿ ಎಸ್ ಭಟ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಎಸ್. ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್ ವಂದಿಸಿದರು.