ವಾಣಿಜ್ಯ ಬ್ಯಾಂಕ್ ಗಳಿಗಿಂತ ಸಹಕಾರಿ ಸಂಘಗಳು ಉತ್ತಮ ಸೇವೆ ನೀಡುತ್ತಿವೆ. ಆದ್ದರಿಂದ ಜನರು ಸಹಕಾರಿ ಸಂಘಗಳ ಮೇಲೆ ವಿಶ್ವಾಸ ಇಡಲು ಸಾಧ್ಯವಾಗಿದೆ. ವಾಣಿಜ್ಯ ಬ್ಯಾಂಕ್ ಗಳು ವಿಕಸನಗೊಳ್ಳದೇ ಸಂಕುಚಿತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ನಗರದ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಆರ್ಥಿಕ ವ್ಯವಹಾರದ ಕಾರ್ಯದಕ್ಷತೆ, ಆದಾಯ ತೆರಿಗೆ ಹಾಗೂ ಚುನಾವಣಾ ವಿಧಿ ವಿಧಾನ ಕುರಿತ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ, ಲೆಕ್ಕ ಪರಿಶೋಧಕ ಸಂಘದ ನಿವೃತ್ತ ನಿಬಂಧಕ ಗಣೇಶ್ ಮಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿ ಪ್ರಸಾದ್ ಶೆಟ್ಟಿ, ರಾಜು ಪೂಜಾರಿ, ಅಶೋಕ್ ಕುಮಾರ್ ಬಳ್ಳಾಲ್, ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಯಶ್ ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.












