ಉಡುಪಿ: ಸಹಕಾರವೆಂದರೆ ಅದು ಕೇವಲ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ಸಹಕಾರವೆಂದರೆ ಅದು ಜೀವನ ತತ್ವ. ಜನರಲ್ಲಿ ಪ್ರೀತಿ-ವಿಶ್ವಾಸ, ಕೊಟ್ಟು ಪಡೆದುಕೊಳ್ಳುವ ಗುಣವಿದ್ದಾಗ ಸಹಕಾರ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಬುಧವಾರ ನಗರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 19 ನೇ ಶಾಖೆಯನ್ನುದ್ಘಾಟಿಸಿ ಮಾತನಾಡಿದರು.
ಅರ್ಥವ್ಯವಸ್ಥೆ ಎನ್ನುವುದು ಮುಳ್ಳಿನ ಹಾಸಿಗೆ ಇದರ ಬಗ್ಗೆ ಎಚ್ಚರವಿರಬೇಕು. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಅವಶ್ಯ. ಗ್ರಾಹಕರು ಸಹಕಾರಿ ಸಂಘದ ಜೀವಾಳ. ಅವರ ಸಹಕಾರದಿಂದಲೆ ಸಂಘವು ಯಶಸ್ಸು ಕಾಣಲು ಸಾಧ್ಯವಾಗಿದೆ. ಜೀವನದಲ್ಲಿ ಅರ್ಥ ಸಂಪಾದನೆಯ ಜೊತೆ ಆಧ್ಯಾತ್ಮಿಕತೆಗೂ ಮಹತ್ವ ನೀಡಬೇಕು. ಆಧ್ಯಾತ್ಮಿಕತೆ ಭಾರತದ ಅಂತಃಸತ್ವ. ಪ್ರತಿಯೊಬ್ಬರೂ ತಮ್ಮ ಇರವಿನ ಅರಿವನ್ನು ಮೂಡಿಸಿಕೊಂಡಾಗ ಆಧ್ಯಾತ್ಮಿಕತೆ ಸಾಧ್ಯ. ಉಡುಪಿ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಜನರು ಗ್ರಾಮವಿಕಾಸ ಯೋಜನೆಯ ಮೇಲೆ ವಿಶ್ವಾಸವಿರಿಸಿದಂತೆ ಸಹಕಾರಿ ಸಂಘದ ಮೇಲೆ ವಿಶ್ವಾಸವನ್ನಿಟ್ಟು ಬೆಳೆಸಬೇಕು ಎಂದರು.
ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸಿ ಸಾವಯವ ಕೃಷಿಗೆ ಒಡ್ಡಿಕೊಂಡರೆ ವಿಷ ತಿನ್ನುವುದು ಕಡಿಮೆಯಾದೀತು. ಆಹಾರವು ವಿಷವಾಗಬಾರದು ಅದು ಔಷಧಿಯಾಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಕಾರಿ ಸಂಘದ ಗೌರವಮಾರ್ಗದರ್ಶಕಿ ಶ್ರೀ ಮಾತಾನಂದಮಯಿ ಮಾತನಾಡಿ, ಹಳ್ಳಿಗಳ ಆರ್ಥಿಕ ಅಭಿವೃದ್ದಿಯಾದಲ್ಲಿ ರಾಷ್ಟ್ರದ ಉನ್ನತಿ ಸಾಧ್ಯ. ಈ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿ ಸಂಘ ಮತ್ತು ಗ್ರಾಮ ವಿಕಾಸ ಯೋಜನೆಗಳು ಕೆಲಸ ಮಾಡುತ್ತಿದ್ದು ಇದಕ್ಕೆ ಗುರೂಜಿಯವರ ಮಾರ್ಗದರ್ಶನ ಮತ್ತು ಸಂಸ್ಥಾನದಿಂದ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಸಹಕಾರಿ ಕ್ಷೇತ್ರವು ಜನರ ವಿಶ್ವಾಸದಿಂದ ನಡೆಯುವಂತಹುದು. ಇಲ್ಲಿ ಕಾನೂನಿಗಿಂತಲೂ ವಿಶ್ವಾಸವೇ ಮುಖ್ಯ. ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ಬದ್ದತೆ ಇದ್ದಾಗ ಕ್ಷೇತ್ರದ ಏಳಿಗೆ ಸಾಧ್ಯ. ಜಿಲ್ಲೆಗೆ ವಿಶ್ವಾಸಾರ್ಹ ಸಂಸ್ಥೆಯೊಂದು ಬಂದಿರುವುದು ಸಂತೋಷದ ವಿಚಾರ. ಆರ್ಥಿಕ ಉನ್ನತಿಯ ಜೊತೆ ಜೊತೆಗೆ ಹಿಂದೂ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಗ್ರಾಮ ವಿಕಾಸ ಯೋಜನೆಯಿಂದ ಆಗುತ್ತಿದೆ. ಗುರೂಜಿಯ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರವು ಇನ್ನಷ್ಟು ಅಭಿವೃದ್ದಿಯನ್ನು ಕಾಣಲಿ ಎಂದು ಶುಭಹಾರೈಸಿದರು.
ದ.ಕ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಠೇವಣಿ ಪತ್ರ ಬಿಡುಗಡೆಗೊಳಿಸಿದರು.
ಸಂಘದ ಅಧ್ಯಕ್ಷ ಲ.ಎ ಸುರೇಶ್ ರೈ, ಕ.ರಾ.ಸೌ.ಸಂ.ಸ.ನಿ ನಿರ್ದೇಶಕ ಎಸ್.ಕೆ ಮಂಜುನಾಥ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ, ವಿಜಯ ಬ್ಯಾಂಕ್ ನಿವೃತ್ತ ಡಿಜಿಎಂ ಉದಯ್ ಕುಮಾರ್ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ತಾರನಾಥ ಶೆಟ್ಟಿ ಚಿಕ್ಕಲ್ ಬೆಟ್ಟು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಶ್ರೀಮತಿ ಅಮಿತ ಗಿರೀಶ್, ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ, ಯೋಜನಾ ನಿರ್ದೇಶಕ ಕಿರಣ್ ಉರ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರೆಬೈಲು, ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸ್ವಾಗತಿಸಿದರು. ಲೋಕೇಶ್ ರೈ ನಿರೂಪಿಸಿದರು.