Home Trending ಹೈಕಮಾಂಡ್ ಸೂಚನೆಗೆ ನಾನು ಬದ್ಧ: ಮೊದಲ ಬಾರಿಗೆ ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಹೈಕಮಾಂಡ್ ಸೂಚನೆಗೆ ನಾನು ಬದ್ಧ: ಮೊದಲ ಬಾರಿಗೆ ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೇಂದ್ರದ ನಾಯಕರು ಕೊಡುವ ಸೂಚನೆಗೆ ನಾನು ಬದ್ಧ ಎನ್ನುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮೊದಲ ಬಾರಿಗೆ ರಾಜೀನಾಮೆ ಸುಳಿವು ಕೊಟ್ಟಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರಂದು ರಾಷ್ಟ್ರೀಯ ನಾಯಕರು ಸೂಚನೆ ಕೊಡುತ್ತಾರೆ. ಜುಲೈ 26ರಿಂದ ಹೈಕಮಾಂಡ್ ಕೊಡುವ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎನ್ನುವ ಮೂಲಕ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ನೀಡಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ. ಕೇಂದ್ರ ಏನೂ‌ ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು 75 ವರ್ಷ ದಾಟಿದವರಿಗೆ ಯಾರಿಗೂ ಅಧಿಕಾರ ಕೊಟ್ಟಿರಲಿಲ್ಲ. ಆದರೆ ನನ್ನ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ 78 ವರ್ಷದವರೆಗೂ ನನಗೆ ಸಿಎಂ ಸ್ಥಾನ ಕೊಟ್ಟಿದ್ದರು. ಹೀಗಾಗಿ ಹೈಕಮಾಂಡ್ ಏನೂ ಸೂಚನೆ ಕೊಡುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರ ತರಲು ಶ್ರಮಿಸುತ್ತೇನೆ.

ಕಾರ್ಯಕರ್ತರು, ಅಭಿಮಾನಿಗಳು ನನಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಬೇಕು.
ಯಾವುದೇ ಗೊಂದಲ ಮಾಡಿಕೊಳ್ಳಬಾರದು.
ನನ್ನ ಪರವಾಗಿ ಚಳುವಳಿ, ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.