ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೆ ಸೀಮಿತಗೊಂಡಿದ್ದಾರೆ: ಬಿಜೆಪಿ ಶಾಸಕ ಉಮೇಶ್ ಕತ್ತಿ ಕಿಡಿ

ಬೆಳಗಾವಿ: ಸಿಎಂ ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಅವರು ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಕೊಡುತ್ತಿಲ್ಲ. ಇದರಿಂದ ನನಗೆ ಬಹಳ ನೋವಾಗಿದೆ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಇಷ್ಟು ದಿನ ಕಾದಿದ್ದೆ. ಆದರೆ ಅದು ನಡೆಯುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಧ್ವನಿ ಎತ್ತಬೇಕಾಗಿದೆ ಎಂದು ಮುಖ್ಯಮಂತ್ರಿ‌ ವಿರುದ್ಧ ವಾಗ್ದಾಳಿ ನಡೆಸಿದರು.
ಕೊರೊನಾ, ಮಾದಕ ವಸ್ತುಗಳ ದಂಧೆ ನೆಪದಲ್ಲಿ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ದೂರಿದರು.

ನಾನು ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಲ್ಲ. ಅದು ಸಿಗುತ್ತೋ ಬಿಡುತ್ತೋ ಮುಖ್ಯವಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ದನಿ ಎತ್ತುತ್ತಲೇ ಇರುತ್ತೇನೆ. ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಏನು ಬೇಕಾದರೂ ಅಂದು ಕೊಳ್ಳಲಿ ಎಂದು ನೇರಾನೇರವಾಗಿ ವಾಗ್ದಾಳಿ ನಡೆಸಿದರು.

ಮುಂದೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಚುನಾವಣೆ ಬಂದಾಗ ನೋಡಿಕೊಳ್ಳುತ್ತೇನೆ. ಅಲ್ಲಿವರೆಗೆ ಏನು ಬೇಕಾದರೂ ಆಗಬಹುದು ಎಂದು ಬಾಂಬ್ ಸಿಡಿಸಿದರು.