ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ!

ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ!

  • ಟಿ.ದೇವಿದಾಸ್

ಕಟ್ಟರ್ ಹಿಂದುತ್ವ ವಿರೋಧಿ, ಮುಸ್ಲಿಂ ಪಕ್ಷಪಾತಿ, ನಾಸ್ತಿಕವಾದಿ ಚಿಂತಕ, ದ್ವೇಷ ರಾಜಕಾರಣದ ರಾಯಭಾರಿ, ದುರಹಂಕಾರಿ, ಜಾತ್ಯತೀತ ಎನಿಸಿದ ಜಾತಿವಾದಿ ರಾಜಕಾರಣಿ, ರಾಜಕೀಯ ದಾಳಗಳನ್ನು ಬೇಕಾದಂತೆ ಬೇಕಾದ ಹಾಗೆ ಉರುಳಿಸುವ ಚಾಣಾಕ್ಷ.. ಹೀಗೆ ಅನ್ಯಾನ್ಯ ರೀತಿಯಲ್ಲಿ‌‌‌ ಆರೋಪ, ನಿಂದನೆ, ಹಳಹಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿದ್ದರೂ, ಎಂತಹ ಪ್ರತಿಕೂಲ‌ ಪರಿಸ್ಥಿತಿಯಲ್ಲೂ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ೧೫ ವರ್ಷಗಳ ರಾಜ್ಯ ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ನಾಯಕರಾಗಿ ದಾಖಲೆಯನ್ನೂ ಬರೆದಿದ್ದಾರೆ. ಇದೇನು ಸಣ್ಣ ಸಂಗತಿಯೇನಲ್ಲ! ಅದೃಷ್ಟ ಅಂದರೆ ಇದೇ ಅಲ್ಲವೆ? ಹಾಗೆ ನೋಡಿದರೆ ರಾಜ್ಯ ಕಾಂಗ್ರೆಸ್ಸಲ್ಲಿ ನಾಯಕರುಗಳಿಗೇನೂ ಕೊರತೆಯಿಲ್ಲ. ಆದರೆ, ಸಿದ್ಧರಾಮಯ್ಯನವರು ಕಾಂಗೆಸ್ಸಿಗೆ ವಲಸಿಗರು. ಮೂಲ ಕಾಂಗ್ರೆಸ್ಸಿಗರಿಗೆ ಸಿದ್ಧರಾಮಯ್ಯನವರ ಮೇಲೆ ಅಂಥಾದ್ದೇನೂ ಒಲವಿಲ್ಲ ಎಂಬುದಂತೂ ನೂರಕ್ಕೆ ನೂರು ಸತ್ಯ ಅಷ್ಟೇ ಅಲ್ಲ, ಅದು ಪಬ್ಲಿಕ್ ಸೀಕ್ರೆಟ್ಟೂ ಅಹುದು! ದೇವೇಗೌಡರನ್ನು, ಯಡಿಯೂರಪ್ಪರನ್ನು ಹೊರತುಪಡಿಸಿದರೆ ರಾಜ್ಯ ರಾಜಕೀಯದಲ್ಲಿ ಮಾಸ್ ಲೀಡರ್ ಆಗಿ ಕಾಂಗ್ರೆಸ್ಸಲ್ಲಿ ಕಂಡವರು ಸಿದ್ಧರಾಮಯ್ಯನವರೇ ಹೊರತು ಬೇರೆ ಯಾರೂ ಇಲ್ಲ! ಈಗಲೂ ಸಿದ್ಧರಾಮಯ್ಯನವರ ಅಸ್ತಿತ್ವಕ್ಕೆ ಅಸ್ಮಿತೆಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಮಾತ್ರವಲ್ಲ, ಹೈಕಮಾಂಡ್ ಮಟ್ಟದಲ್ಲೂ ಹೆಚ್ಚು ಮೌಲ್ಯವಿದೆ, ಗೌರವವಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಪದವಿಯ ರೇಸಿನಲ್ಲಿ ಕೊನೆಗೂ ಅವರೇ ಆಯ್ಕೆಯಾದದ್ದು!

ಸಿದ್ಧರಾಮಯ್ಯನವರಂತೆ ದೇವೇಗೌಡರಿಗಾಗಲೀ, ಯಡಿಯೂರಪ್ಪರಿಗಾಗಲೀ ಅಧಿಕಾರ ಸ್ಥಾನದಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಾಗಲಿಲ್ಲ. ಪಕ್ಷ ಸಂಘಟನೆ ಮಾಡಿ, ಚುನಾವಣೆಯಲ್ಲಿ ಪಕ್ಷದ ಸಾರಥ್ಯವನ್ನು ಸಿದ್ಧರಾಮಯ್ಯನವರು ವಹಿಸಿಕೊಂಡು ಕಾಂಗ್ರೆಸ್‌ ಇಷ್ಟು ಬಹುಮತದೊಂದಿಗೆ  ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಡಿಕೆಶಿಯವರೇ ಮುಖ್ಯಮಂತ್ರಿ ಆಗಬೇಕು ಎಂಬ ಬಂಡಾಯದ ಕೂಗು ಕಾಂಗ್ರೆಸ್ಸಲ್ಲೇ ಇತ್ತು. ಈಗಲೂ ಇದೆ. ಸುದೀರ್ಘ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಹದಿನೈದು ವರ್ಷಗಳ‌ ಹಿಂದೆ ಸಿದ್ಧರಾಮಯ್ಯ ಅಹಿಂದ ಅಜೆಂಡಾ ಸಮೇತ ಕಾಲಿಟ್ಟವರು. ಪ್ರಾಯಃ ಅವರು ಕಾಲಿಟ್ಟ ಗಳಿಗೆ ಚೆನ್ನಾಗಿರಬೇಕೇನೋ! ಎರಡು ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಎರಡು ಸಲವೂ ಅವರೇ ಮುಖ್ಯಮಂತ್ರಿಯಾದರು. ಇದನ್ನು ಕಾಂಗ್ರೆಸ್ಸಿನ ಯಾವ ನಾಯಕನಿಗೂ ತಡೆಯಲಾಗಲಿಲ್ಲವೋ ಅಥವಾ ಸಿದ್ಧರಾಮಯ್ಯನವರಿಗೆ ಇರುವ ವ್ಯಕ್ತಿಗತವಾದ ವರ್ಚಸ್ಸು ಬೇರೆ ಯಾವ ನಾಯಕನಿಗೂ ಇಲ್ಲವೋ ಅಥವಾ ಹೈಕಮಾಂಡ್ ಒಲವೋ ಅಥವಾ ಸಿದ್ಧರಾಮಯ್ಯನವರ ಚಾಣಾಕ್ಷ ರಾಜಕೀಯ‌ ನಡೆಯೋ ಏನೋ, ಅಂತೂ ಅದೃಷ್ಟ ಅವರಿಗೆ ಒಲಿದಿದೆ. ಒಲಿದು ಬಂದು ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸಿದೆ. ನಿಜವಾದ ಅದೃಷ್ಟ ಅಂದ್ರೆ ಇದೇ ಅಲ್ಲವೆ? ರಾಜಕೀಯದಲ್ಲಿ ಸಿದ್ಧರಾಮಯ್ಯನವರದು ಬಹುವರ್ಣರಂಜಿತ ವ್ಯಕ್ತಿತ್ವ ಅಂತ ಎಷ್ಟೋ ಸಲ ನನಗನ್ನಿಸಿದೆ. ಅವರ ಮಾತು, ಹಾವಭಾವ, ವೇಷಭೂಷಣ ಎಲ್ಲವೂ ಆಕರ್ಷಣೀಯ ಅಲ್ಲವೆನ್ನಲು ಸಾಧ್ಯವೆ?

ಸಿದ್ಧರಾಮಯ್ಯನವರ ಬಗ್ಗೆ ಯಾರೇನೇ ಹೇಳಲಿ, ಅದಕ್ಕವರು ಅರ್ಹರೋ ಅನರ್ಹರೋ ಎಂಬುದನ್ನೂ ಗಣನೆಗೆ ತೆಗೆದುಕೊಂಡು ಅವರದು ಬಲು ಗಟ್ಟಿಯಾದ ಅದೃಷ್ಟವೆಂದೇ ಭಾವಿಸುತ್ತೇನೆ. ಜೆಡಿಎಸ್ಸಲ್ಲಿದ್ದಾಗ ಎರಡು ಬಾರಿ ಡಿಸಿಎಂ ಆಗಿದ್ದ ಸಿದ್ಧರಾಮಯ್ಯನವರು ಕಾಂಗ್ರೆಸ್ಸಿಗೆ ಬಂದಾಗ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬ ವಿಂಗಡಣೆ ಜೋರಾಗಿ ಸದ್ದು ಮಾಡುತ್ತಲೇ ಇತ್ತು. ದೊಡ್ಡ ಬಹುಮತದೊಂದಿಗೆ ಗೆದ್ದಾಗ ಮೊನ್ನೆ ಮೊನ್ನೆಯವರೆಗೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ತುರಿಯಾವಸ್ಥೆ ತಲುಪಿದಾಗಲೂ ಈ ವಿಂಗಡಣೆಯ ಪ್ರಭಾವ ಕಾಣುತ್ತಿತ್ತು. ಕಾನೂನು ಪದವೀಧರರಾಗಿ ಜಿಲ್ಲಾ ನ್ಯಾಯಾಲಯಗಳಲ್ಲಿ ಸಿದ್ದರಾಮಯ್ಯ ಅವರನ್ನು ಮೊದಲು ಗುರುತಿಸಿದವರು  ವಕೀಲರಾಗಿದ್ದ ನಂಜುಂಡ ಸ್ವಾಮಿಯವರು. ಸಿದ್ಧರಾಮಯ್ಯರ ರಾಜಕೀಯ ಜೀವನ ಪ್ರಾರಂಭವಾದದ್ದೇ ಅವರಿಂದ! ಮೈಸೂರು ತಾಲೂಕಿಗೆ ಸ್ಪರ್ಧಿಸಿ ಗೆದ್ದರು. ಅನಂತರ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದಲ್ಲಿ ಸ್ಪರ್ಧಿಸಿದರು ಮತ್ತು 1983ರಲ್ಲಿ ಏಳನೆಯ ಕರ್ನಾಟಕ ವಿಧಾನಸಭೆಗೆ ಮೊಟ್ಟಮೊದಲಿಗೆ ಪ್ರವೇಶಿಸಿದರು. ಇದು ಅಚ್ಚರಿಯ ಗೆಲುವು ಮತ್ತು ಇದು ಹಳೆಯ ಮೈಸೂರು ಪ್ರದೇಶದಲ್ಲಿ ಹೆಸರು ಮತ್ತು ಪ್ರಸಿದ್ಧಿಯನ್ನು ಅವರಿಗೆ ತಂದುಕೊಟ್ಟಿತು. ಅಲ್ಲಿಂದ ಮುಂದಕ್ಕೆ ಅಂದರೆ, ಸರಿಹೊತ್ತಿನವರೆಗೂ ಅವರ ರಾಜಕೀಯವಾದ ಜೀವನ ಅನೇಕ ಏರಿಳಿತಗಳನ್ನು ಕಂಡಿದೆ. ಈ ಏರಿಳಿತಗಳು ಸಿದ್ಧರಾಮಯ್ಯರ ಅರಿವಿನಲ್ಲಿರುವಂತೆ ಜನತೆಯ ಅರಿವಿನಲ್ಲೂ ಇದೆ. ಜನಪರ ರಾಜಕಾರಣಿ ಎಂಬ ಸಂಬೋಧನೆಯ ಮಾತು ಯಡಿಯೂರಪ್ಪನವರಿಗೆ, ದೇವೇಗೌಡರಿಗೆ ಅನ್ವಯಿಸಿ ಹೇಳುವಾಗಲೂ ಸಿದ್ಧರಾಮಯ್ಯನವರು ಮಾತ್ರ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೆ. ಆದರೆ, ಮೂವರೂ ತಮ್ಮ ಆಲೋಚನೆ ಮತ್ತು ಸರ್ಕಾರವನ್ನು ನಡೆಸುವ ನಡೆಯಲ್ಲಿ ಭಿನ್ನವಾಗೇ ಕಾಣುತ್ತಾರೆ. ಇರಲಿ, ಅಂತೂ ಒಂದು ಅದೃಷ್ಟ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪಿತೃಪುಣ್ಯ ವಿಶೇಷವೋ? ಪೂರ್ವಪುಣ್ಯ ವಿಶೇಷವೋ? ವ್ಯಕ್ತಿಗತವಾದ ಸಾಧನೆಯೋ? ಗೊತ್ತಿಲ್ಲ, ಸಮಾಜವಾದ ಸಿದ್ಧರಾಮಯ್ಯರ ಕೈಹಿಡಿದಿದೆ.

ಕೇವಲ ಬಡವರನ್ನು ಕೇಂದ್ರವಾಗಿಟ್ಟುಕೊಂಡು ಸಿದ್ಧರಾಮಯ್ಯನವರು ತಂದ ಯೋಜನೆಗಳು ಬಡವರಿಗೆ ಅನ್ನವನ್ನು ಕೊಟ್ಟಿದೆ ಮತ್ತು ಕೊಡುತ್ತಿರುವುದೇನೋ ನಿಜ. ಆದರೆ, ನಿಜವಾದ ಬಡವರಿಗೆ ಮಾತ್ರ ಈ ಯೋಜನೆಗಳು ದಕ್ಕಿದರೆ ಯಾವ ಪ್ರಶ್ನೆಯೂ ಗುಮಾನಿಯೂ ಹುಟ್ಟಲಾರದು. ಹುಟ್ಟಲೂ ಬಾರದು. ಆದರೆ, ಈ ಯೋಜನೆಗಳು ತಕ್ಕಮಟ್ಟಿಗೆ ಉಳ್ಳವರಿಗೂ ದಕ್ಕಿದೆಯೆಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತಿಲ್ಲದ್ದೇನಲ್ಲ. ಇದು ದುಡಿದು ತಿನ್ನುವ ಮನಸ್ಥಿತಿಯಿಂದ ಜನರನ್ನು ದೂರಮಾಡುತ್ತದೆ ಎಂಬುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಜನರಲ್ಲಿ ಶ್ರಮಸಂಸ್ಕೃತಿಯನ್ನು ಬೆಳೆಸಬೇಕಾದ ಹೊಣೆ ಸರ್ಕಾರದ್ದು. ಫ್ರೀ ಫ್ರೀ ಫ್ರೀ ಅಂತ ಭಾಗ್ಯಗಳನ್ನು ಯೋಜನೆಗಳ ರೂಪದಲ್ಲಿ ಜನರಿಗೆ ಕೊಡುವ ಯಾವ ಸ್ಥಿತಿಯನ್ನೂ ಸರ್ಕಾರಗಳು ಸೃಜಿಸಬಾರದು. ವಸತಿ, ಆರೋಗ್ಯ, ಶಿಕ್ಷಣ, ನೈರ್ಮಲ್ಯ,‌ ಸಾರಿಗೆ‌ಗಳನ್ನು ಮಾತ್ರ ಕಡಿಮೆ ದರದಲ್ಲಿ ಕೊಡಬೇಕೆನ್ನುವ ಆಲೋಚನೆ ಸಿದ್ಧರಾಮಯ್ಯರಿಗೆ ಇಲ್ಲವೆನ್ನಲು ಸಾಧ್ಯವೇ ಇಲ್ಲ. ಉಚಿತವಾಗಿ ಕೊಡುವ ಸವಲತ್ತುಗಳಿಂದ ನಿತ್ಯ ಬದುಕಿನ ದುಡಿಮೆಗೆ ಬೇಕಾದ ಶಕ್ತಿಯನ್ನು ದುಡಿಮೆಯಿಂದಲೇ ಮತ್ತೆ ಸಂಚಯ ಮಾಡಿಕೊಳ್ಳುವ ಅವಕಾಶವನ್ನೇ ಸರ್ಕಾರ‌ ಕಸಿದುಕೊಳ್ಳಲೂ ಬಾರದು ಎಂಬ ಈ ಪ್ರಜ್ಞೆ ಸಮಾಜವಾದದ ಸಿದ್ಧರಾಮಯ್ಯನವರಿಗೆ ಇಲ್ಲವೆ? ಖಂಡಿತವಾಗಿಯೂ ಇದೆ.

ಪಕ್ಷ ಅಥವಾ ತಾನು ಘೋಷಿಸಿದ ಗ್ಯಾರಂಟಿಗಳನ್ನು ಜಾರಿಗೆ ತರಲು ಬೆಲೆಯೇರಿಕೆಯನ್ನು  ಮಾರ್ಗೋಪಾಯವನ್ನಾಗಿ ಕಂಡುಕೊಳ್ಳುವುದರ ಹಿಂದೆ ಸಮಷ್ಟಿಯ ಹಿತವಿಲ್ಲ ಎಂಬ ಸೆನ್ಸು ಸಿದ್ಧರಾಮಯ್ಯರಿಗಿಲ್ಲ ಅಂತ ಹೇಳಲಾದೀತೆ? ನೋ ಚಾನ್ಸ್. ಆಲೋಚಿಸಿ ನೋಡಿ: ಉಳ್ಳವರಿಗೆ ಸರ್ಕಾರ ಜಾರಿಗೆ ತರುವ ಯಾವ ಕಠಿಣ ಆರ್ಥಿಕ ಶಿಸ್ತಿನ ನೀತಿ ನಿಯಮಗಳಿಂದಲೂ ಅಂಥಾದ್ದೇನೂ ಪ್ರತಿಕೂಲ ಎಂಬಂಥ ಪರಿಣಾಮ ಬೀರುವುದಿಲ್ಲ. ಬಡವರಿಗಂತೂ ಸರ್ಕಾರದ ಇಂಥ ಶಿಸ್ತಿನ ಕ್ರಮದಿಂದ ಯಾವ‌ ಸಮಸ್ಯೆಯೂ ಉಂಟಾಗುವ ಪ್ರಶ್ನೆಯೇ ಇರುವುದಿಲ್ಲ. ಯಾಕೆಂದರೆ, ಬಡವರಿಗೆ ಕಳೆದುಕೊಳ್ಳುವ ಭಯವಿರುವುದಿಲ್ಲ. ಶ್ರೀಮಂತರಿಗೆ ಸ್ವಲ್ಪ ಕಷ್ತ ನಷ್ಟವೆನಿಸಿದರೂ ಬದುಕು ಹದಗೆಡುವುದಿಲ್ಲ. ಹಳಿ ತಪ್ಪುವುದಿಲ್ಲ. ಆದರೆ, ಈ ಮಧ್ಯಮ ವರ್ಗದವರ ಪರಿಸ್ಥಿತಿ ಮಾತ್ರ ತೀರಾ ಡೋಲಾಯಮಾನವೇ ಆಗಿ ಬಿಡುತ್ತದೆ. ಮಧ್ಯಮ ವರ್ಗದವರಲ್ಲೂ ಆರ್ಥಿಕವಾಗಿ ಮೇಲ್ಮಟ್ಟದಲ್ಲಿ ಇರುವಂಥವರಿಗೆ ಸ್ವಲ್ಪ ಮಟ್ಟಿಗಿನ ಘಾಸಿಯಾಗುವುದು ಗ್ಯಾರಂಟಿ. ಆದರೆ, ಆರ್ಥಿಕವಾದ ಶಿಸ್ತಿನಿಂದ ನಿತ್ಯದ ಬದುಕನ್ನು ಅಲ್ಲಿಂದಲ್ಲಿಗೆ‌ ಎಂಬಂತೆ ಸಮತೋಲದ ಸಮತೂಕದ ಬಾಳನ್ನು ಬದುಕುವವರಿಗೆ ಬೆಲೆಯೇರಿಕೆಯ ಬಿಸಿಯ ಘಾತ ಅಷ್ಟಿಷ್ಟಲ್ಲ! ಅದು ಕೊನೆಯವರೆಗೂ ಕಾಡುತ್ತಲೇ ಇರುತ್ತದೆ. ಮತ್ತು ಸ್ವಲ್ಪ ಏರುಪೇರಾದರೂ ಮತ್ತೆ ಹಳಿಯನ್ನು ಹಿಡಿಯಲಾರದ ಸ್ಥಿತಿಗೆ ತಂದೊಡ್ಡುತ್ತದೆ. ಮಧ್ಯಮ ವರ್ಗದವರಿಗೆ ಸಾಲವೇ ಹೊನ್ನ ಶೂಲವಾಗುವುದು ಇಂಥ ಸಂದರ್ಭಗಳಲ್ಲಿ! ಒಂದು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಸಿದ್ಧರಾಮಯ್ಯನವರಿಗೆ ಸರಿಹೊತ್ತಿನ ಬದುಕಿನಲ್ಲಿ ಆರ್ಥಿಕವಾಗಿ ವಿಂಗಡಿಸಲ್ಪಡುವ ಈ ಬಡತನದ ವರ್ಗ, ಮಧ್ಯಮ ವರ್ಗ, ಉಳ್ಳವರ ವರ್ಗಗಳ ನಿತ್ಯ ಬದುಕಿನ ಹದ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ.

ಸ್ವಭಾವತಃ ಕೆಲವೊಮ್ಮೆ ಮೊಂಡು, ಅಹಂಕಾರಿ ಅನಿಸಿದರೂ ಬದುಕಿನ ಆಕೃತಿಗಳ ಭಾವುಕತೆಯನ್ನು ವಾಸ್ತವದ ಮೂಸೆಯಲ್ಲಿಯೇ ನೋಡುವ ಸಿದ್ಧರಾಮಯ್ಯನವರ ರಾಜಕೀಯದ ಬದುಕು ಮಾತ್ರ ಸಂಪೂರ್ಣವಾಗಿ ಭಾವುಕತೆಯನ್ನು ಆವರಿಸಿದಂತಿದೆ. ಈ ಭಾವುಕತೆಯೇ ಅವರ ಗ್ಯಾರಂಟಿಗಳಲ್ಲಿ ಕಾಣುತ್ತದೆ. ಕೊರಳ ಸೆರೆಯನ್ನು ಉಬ್ಬಿಸಿಕೊಂಡು ನಿಮಗೂ ಫ್ರೀ ಅವರಿಗೂ ಫ್ರೀ ಎನ್ನುವಾಗಲೂ, ನುಡಿದಂತೆ ನಡೆದಿದ್ದೇವೆ, ನುಡಿದಂತೆ ನಡೆಯುತ್ತೇವೆ ಎನ್ನುವಾಗಲೂ ನಾನು ಬಡವರ ಪರ ಎಂಬ ಭಾವನಾತ್ಮಕ ವಲಯವನ್ನು ತನ್ನ ಮಾತುಗಳಿಂದಲೇ ಸೃಷ್ಟಿಸಿಕೊಳ್ಳುವ ಶಕ್ತಿಯಿದೆ ಎಂಬಂತೆ ಭಾವೋದ್ವೇಗದಿಂದ ಅವರು ಮಾತನಾಡುತ್ತಾರೆ. ಎಂಥಾ ಪರಿಸ್ಥಿತಿಯನ್ನೂ ತೀರಾ ಎಂಬಷ್ಟು ಹಗುರವಾಗಿ ಅಲ್ಲದಿದ್ದರೂ ಹಗುರವಾಗೇ ಸ್ವೀಕರಿಸುವ ಸಿದ್ಧರಾಮಯ್ಯನವರ ಎಷ್ಟೋ ರಾಜಕೀಯದ ನಿಲುವುಗಳು ಕಾಂಗ್ರೆಸ್ಸಿನ ಮೂಲ ಸಿದ್ಧಾಂತಕ್ಕೆ ಅಷ್ಟಾಗಿ ಒಗ್ಗುವಂತೆ ಕಾಣುವುದಿಲ್ಲ ಎಂದೇ ನನಗನಿಸುತ್ತದೆ. ಯಾಕೆಂದರೆ, ಸಮಾಜವಾದ ಪರಿಕಲ್ಪನೆ ಕಾಂಗ್ರೆಸ್ಸಿನ ವೈಚಾರಿಕತೆಯಲ್ಲ. ಸದ್ಯದ ವ್ಯವಸ್ಥೆಯನ್ನೇ ನಂಬಿರುವ, ಅಥವಾ ಬೃಹತ್ ಯೋಜನೆಗಳಲ್ಲಿ ಸರ್ವೋದ್ಧಾರದ ಕನಸು ಕಾಣುವ ಎಲ್ಲ ರಾಜಕೀಯ ಪಕ್ಷಗಳೂ, ಎಡಪಕ್ಷಗಳೂ, ನೈತಿಕವಾಗಿ ಟೊಳ್ಳಾಗಿವೆ ಎಂಬುದು ಸಿದ್ಧರಾಮಯ್ಯನವರಿಗೆ ಅರಿವಿಲ್ಲದ ವಿಚಾರವೇನಲ್ಲ. ಅಂಥದ್ದರಲ್ಲಿ ಜನರಿಗೆ ಫ್ರೀ ಕೊಡುವ ಯೋಜನೆಗಳನ್ನು ಸಮಾಜವಾದದ ಮೂಲಕ ಸಮರ್ಥಿಸಿಕೊಳ್ಳುವ ಸಿದ್ಧರಾಮಯ್ಯನವರು ಕಾಂಗ್ರೆಸ್ಸಿನ ಜಾಯಮಾನಕ್ಕೆ ಹೊರತಾಗಿಯೇ ನನಗೆ ಕಾಣುತ್ತಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ತಂತ್ರಗಳನ್ನು ಹೀಗೂ ಹೆಣೆಯಬಹುದು ಎಂಬುದು ಗೊತ್ತಾದದ್ದು ಇದೇ‌ ಮೊದಲೇನಲ್ಲ. ಆದರೆ,‌ ಹೀಗೂ ಬದಲಾವಣೆ ಸಾಧ್ಯವೆಂದೂ, ಸಾಧುವೆಂದೂ ತಿಳಿದ ಜನರು ಈಗ ಕುದಿಯತೊಡಗಿದ್ದಾರೆ ಎಂಬುದು ಸಿದ್ಧರಾಮಯ್ಯನವರ ಗಮನಕ್ಕೆ ಬಂದಿಲ್ಲ ಅಂತ ಹೇಗೆ ಹೇಳುವುದು? ನೋ ವೇ!

ಎಲ್ಲರೂ ಬಾಚಿ ಬಾಚಿ ಉಣ್ಣುವಾಗ ಜಾತಿಯಿಂದ, ಅರ್ಥದಿಂದ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ  ಅಬಲರಾದ ಬಡವರು ತುತ್ತಾದರೂ ಉಣ್ಣಲಿ ಎಂಬ ಭಾವುಕ ದೃಷ್ಟಿಕೋನ‌ದ ಆಲೋಚನೆಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸಾಧುವೆಂಬ ಪ್ರಶ್ನೆಗಳು ನೈತಿಕವಾದ ಪ್ರಜಾತಂತ್ರದಲ್ಲಿ ನಂಬಿಕೆಯುಳ್ಳ ನನ್ನಂಥವರಿಗೆ ಇದ್ದೇ ಇರುತ್ತವೆ. ಈ ಮಾತು ಕೇವಲ ಅಂದರೆ ಕೇವಲ‌ ಸಿದ್ಧರಾಮಯ್ಯನವರಿಗೆ ಮಾತ್ರ ಅನ್ವಯಿಸುವಂತಿಲ್ಲ. ಇಂಥ ಭಾವುಕ ದೃಷ್ಟಿಕೋನವನ್ನು ಯಾವುದೇ ಪಕ್ಷ ಅಥವಾ ಯಾರೇ ಪ್ರಚುರ ಪಡಿಸಿದರೂ ನೈತಿಕವಾದ ಪ್ರಜಾತಂತ್ರದ ನಂಬಿಕೆಯಿಟ್ಟ ಯಾರಿಗೇ ಆದರೂ ಪ್ರಶ್ನೆಗಳು ಕೊನೆಯವರೆಗೂ ಇದ್ದೇ ಇರುತ್ತದೆ. ಯಾಕೆಂದರೆ, ಸರ್ಕಾರವೊಂದು function ಆಗುವ ಒಟ್ಟೂ ವ್ಯವಸ್ಥೆಯ ಓಘಕ್ಕೆ, ವೇಗದ ಓಟದಲ್ಲಿ ಮಧ್ಯೆ ಮಧ್ಯೆ ಹರ್ಡಲ್ಸ್ ಗಳನ್ನು ಇಟ್ಟ ಹಾಗೆ ಇವು ಒಟ್ಟೂ ಪ್ರಗತಿ‌ ಅಥವಾ ಅಭಿವೃದ್ಧಿಗೆ ಪೆಟ್ಟು ಕೊಡಲಾರದೆ? ಈಗಾಗಲೇ ಅದರ ಪರಿಣಾಮದ ಒಟ್ಟೂ ಮಾರಕವನ್ನು ಸರ್ಕಾರವೇ ಎದುರಿಸುತ್ತಿರುವುದಂತೂ ಸುಳ್ಳಲ್ಲ! ಹದಿನಾಲ್ಕು ಬಾರಿ ಬಜೆಟ್ಟನ್ನು ಮಂಡಿಸಿದ ವಿತ್ತವಿನಿಯೋಗತ್ವದ ಅನುಭವ ಮತ್ತು ಮೊನ್ನೆ ಬಜೆಟ್ಟನ್ನು ಮಂಡಿಸಿದ ಬಳಿಕ ಪ್ರತಿಪಕ್ಷಗಳ ಪ್ರಶ್ನೆಗೆ ಪ್ರತ್ಯುತ್ತರವಾಗಿ, ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುತ್ತೇನೆಂಬ ಧಾರ್ಷ್ಟ್ಯದ ಮಾತನ್ನು ಆಡಿದ ಸಿದ್ಧರಾಮಯ್ಯನವರಿಗೆ ಇದರ ಬಗ್ಗೆ ಎಚ್ಚರಿಸುವ ಅಗತ್ಯವಂತೂ ಖಂಡಿತವಾಗಿ ಇಲ್ಲವೇ ಇಲ್ಲ. ಆದರೂ ಬಡವರ ಹಸಿವನ್ನು ಸ್ವಾನುಭವದಿಂದ ಸ್ವಅರಿವಿನಿಂದ ಅರ್ಥೈಸಿಕೊಂಡೋ ಅಥವಾ ಬಡತನ ತಂದೊಡ್ಡುವ ಹೀನಸ್ಥಿತಿಯನ್ನು ಸ್ಮತಿಯ ಅರಿವಿನಲ್ಲಿ ತಂದುಕೊಂಡೋ ಘೋಷಿಸಿದ ಗ್ಯಾರಂಟಿಗಳ ಹಿಂದೆ ಸಿದ್ಧರಾಮಯ್ಯನವರು ತಾಯೀ ಹೃದಯದ ಸಂಕೇತವಾಗಿ ಕಾಣುತ್ತಾರೆಂಬ ಜನರ ನಂಬಿಕೆ ಭ್ರಮೆಯಾಗಬಾರದು. ಆದರೆ, ಅದೇ‌ ನೆಲೆಯಲ್ಲಿ ಸಮಷ್ಟಿಯ ಚಿಂತನೆಯೂ ಅವರ ತಾಯೀ ಹೃದಯದಲ್ಲಿ ಕಾಣುವಂತಾಗಬೇಕು. ಈ ಸಮಷ್ಟಿಯ ಚಿಂತನೆಯಲ್ಲಿ ಎಲ್ಲ ಜಾತಿ ಪಂಥ ವರ್ಗಗಳೂ ಸೇರಿರಬೇಕು. ಕೇವಲ ಮೋದಿಯನ್ನು, ಬಿಜೆಪಿಯನ್ನು ದ್ವೇಷಿಸುವುದೇ ಅಥವಾ ರಾಜಕೀಯವಾಗಿ ಬಿಜೆಪಿಯ ಸಿದ್ಧಾಂತವನ್ನು ಮಟ್ಟಹಾಕುವುದೇ, ಆಥವಾ ಸ್ವಪಕ್ಷೀಯರನ್ನು ಅಲ್ಲಲ್ಲಿ ಮಣಿಸುವುದೇ ತನ್ನ ರಾಜಕೀಯ ಬದುಕಿನ ಮುಖ್ಯ ಧೋರಣೆಯಾಗಿ, ನಿತ್ಯ ಕಾಯಕವೂ ಆಗಿ ಸಿದ್ಧರಾಯಮಯ್ಯನವರ ರಾಜಕೀಯವಾದ ಪಟ್ಟುಗಳು ಬೆಳೆಯಬಾರದು ಎಂಬ ಎಚ್ಚರದಲ್ಲಿ ಅವರು ಪ್ರಜಾತಾಂತ್ರಿಕ ಸರ್ಕಾರವನ್ನು‌ ಮುನ್ನಡೆಸುವಂತಾಗಲಿ ಎಂಬ ಸದಾಶಯ ಸದಾಗ್ರಹ ನೈತಿಕವಾದ ಪ್ರಜಾತಂತ್ರದಲ್ಲಿ ನಂಬಿಕೆಯುಳ್ಳ ನನ್ನಂಥವರಲ್ಲಿ ಆಗ್ರಹಪೂರ್ವಕವಾಗಿ ಇದ್ದೇ‌ ಇರುತ್ತದೆ.

ವ್ಯವಸ್ಥೆಯಲ್ಲೇ ಇರುವ ಲೋಪದೋಷವನ್ನು ನೋಡುವ ಬದಲು ವ್ಯಕ್ತಿಗಳ ಮೇಲೆ ಆರೋಪ ಹೊರಿಸಿದ ಪರಿಣಾಮವಾಗಿ,  ವಿಧವೆಯರಿಗೆಲ್ಲ ಪೆನ್ಶನ್ ಕೊಟ್ಟ, ಭೂ ಕಾಯ್ದೆಯಲ್ಲಿ ಹಲವು ಸುಧಾರಣೆಗಳನ್ನು ತಂದ ದೇವರಾಜು ಅರಸು ಅವರು ಭ್ರಷ್ಟಾಚಾರದ ದೊಡ್ಡಾಗರದ ಪ್ರತಿನಿಧಿಯಾಗಿ ಜನರಿಗೆ ಕಂಡಿದ್ದರು ಎಂಬುದು ಕರ್ನಾಟಕದ ರಾಜಕೀಯದ ಚರಿತ್ರೆಯಲ್ಲಿ ಇನ್ನೂ ಹಳತಾಗಿ ಮಾಸಿ ಹೋಗಿಲ್ಲ. ಆದರೆ, ಅರಸು ಅವರು ಈಗ ಹಲವು ಸಾಮಾಜಿಕ ಬದಲಾವಣೆಗಳನ್ನು ಮಾಡಿದ ಹೀರೋ ಆಗಿ ಕಾಣುತ್ತಿದ್ದಾರೆಂಬುದು ಸುಳ್ಳಲ್ಲ! ಅವರನ್ನು ಬೈದವರೇ ಅವರನ್ನು ಹೊಗಳಿದ್ದೂ ಇದೆ. ಆದರೆ, ಭ್ರಷ್ಟಾಚಾರವನ್ನು ಬಳಸಿಕೊಂಡೇ ಹಲವು ಸಾಮಾಜಿಕ ಸುಧಾರಣೆಗಳನ್ನು ತಂದ ಅರಸು ನಿಜಕ್ಕೂ ಕ್ರಾಂತಿಕಾರಿಯೋ ಎಂಬುದು‌ ಮಾತ್ರ ಇಂದಿಗೂ ಪ್ರಶ್ನೆಯಾಗೇ ಉಳಿದಿದೆ. ಇಂಥ ಪ್ರಶ್ನೆಗೆ ಹೊರತಾಗಿಯೇ ಕರ್ನಾಟಕದ ರಾಜಕೀಯದ ಚರಿತ್ರೆಯಲ್ಲಿ ಸಿದ್ಧರಾಮಯ್ಯನವರ ಹೆಸರು ಜನಜನಿತವಾಗಬೇಕಿದೆ. ಅಂದರೆ, ಯಾವ ಅಸ್ಪಷ್ಟತೆಯೂ ಮುಂದಿನ‌ ತಲೆಮಾರಿಗೆ ಇರದಂತೆ ಸಮಷ್ಟಿಯ ಚಿಂತನೆಯಲ್ಲಿ ಸಿದ್ಧರಾಮಯ್ಯನವರು ಆಡಳಿತವನ್ನು ನಡೆಸುವುದರ ಮೂಲಕ ರಾಜಕೀಯದ ಹೊಸ ಚಿಂತನೆಗೆ ಹೊಸ ಮೊನಚನ್ನು ನೀಡಬೇಕಿದೆ.

ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂದಾಗದೇ ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಸಿದ್ಧರಾಮಯ್ಯನವರ ಕಾಲದಲ್ಲಿ ರಾಜ್ಯ ಕಾಣುವಂತಾಗಲಿ. ಆ ಮೂಲಕ ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಅರಸು ಅವರ ಸಾಲಿಗೆ ಸಿದ್ಧರಾಮಯ್ಯನವರು ಸೇರುವಂತಾಗಲಿ. ದ್ವೇಷ ಮತ್ತು ಅಹಂಕಾರದ ಪೊರೆಯನ್ನು ಕಳಚಿಟ್ಟರೆ, ಸಮಾಜವಾದವನ್ನು ಬೇಕಾದಷ್ಟೇ ಬಳಸಿಕೊಂಡರೆ, ತನ್ನ ಪಾಡಿಗೆ ತಾನು ನೈತಿಕ ರಾಜಕಾರಣದಲ್ಲಿ ಹೆಚ್ಚು ಪ್ರಮಾಣದಲ್ಲಿ ತೊಡಗಿಸಿಕೊಂಡರೆ, ಜನರ ಸಂವೇದನೆಗಳಿಗೆ ಇನ್ನಷ್ಟು ಹತ್ತಿರವಾದರೆ ಇನ್ನೂ ಒಳ್ಳೆಯ ಹೆಸರು ರಾಜಕಾರಣದಲ್ಲಿ ಮಾತ್ರವಲ್ಲ, ಜನಮಾನಸದಲ್ಲೂ ಪಡೆಯಬಹುದಾದ ಬೌದ್ಧಿಕ ಮತ್ತು ವೈಚಾರಿಕ ಮೊನಚನ್ನು ಹೊಂದಿರುವ ಸಿದ್ಧರಾಮಯ್ಯನವರು ಉದಾತ್ತ ಹಿಂದೂವಾಗಿ ಕಾಣುವುದಂತೂ ಸತ್ಯ!

 

  • ಟಿ.ದೇವಿದಾಸ್