ಬೆಂಗಳೂರು: ನ.24 ರಿಂದ 26 ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 1 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಇದೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದು ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಕಂಬಳವನ್ನು ಸುವ್ಯವಸ್ಥಿತವಾಗಿ ಆಚರಿಸಲು ಹಲವಾರು ಸಮಿತಿಗಳ ನೇಮಕ ನಡೆಯಲಿದ್ದು, ಸುಮಾರು 8 ಲಕ್ಷ ಜನ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಂಬಳದಲ್ಲಿ 150 ಕ್ಕೂ ಮಿಕ್ಕಿ ಕೋಣಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಕೋಣಗಳ ಸಾಗಾಟ ನಡೆಯಲಿದೆ.