ಬೆಂಗಳೂರು : ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಸಭಾಂಗಣದ ಬಳಿ ಇಂದು ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ರದ್ದುಗೊಳಿಸಲಾಗುವುದು ಎಂದರುಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ರದ್ದುಗೊಳಿಸಿ ಸಂವಿಧಾನ ರೀತಿಯಲ್ಲಿ ಶಿಕ್ಷಣ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎನ್ಇಪಿ ಕರಡು ಪ್ರತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಚೇರಿಯಲ್ಲಿ ತಯಾರಾಗಿದೆ. ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಬದಲಾವಣೆ ಮಾಡಿ, ಸಂವಿಧಾನ ರೀತಿಯಲ್ಲಿ ಶಿಕ್ಷಣ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು. ಅಗತ್ಯವಾದ ಕೆಲವು ಸಿದ್ಧತೆಗಳನ್ನು ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕಿದೆ. ಈ ವರ್ಷ ಅದಕ್ಕೆ ಸಮಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರೆದಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ಬಿಜೆಪಿ ದೇಶದಲ್ಲಿ ಎಲ್ಲಾ ಕಡೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಟೀಕಿಸಿದರು.