ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಮಂಡಳಿಗಳು ಮತ್ತು ನಿಗಮಗಳು ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಿಂದಿನ ಸರ್ಕಾರ ನೀಡಿದ್ದ ಯಾವುದೇ ಆದೇಶಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಲು ಸೋಮವಾರ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಇನ್ನೂ ಆರಂಭವಾಗದೇ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಶನಿವಾರ (ಮೇ 20) ಅಧಿಕಾರ ಸ್ವೀಕರಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಐದು ಭರವಸೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದರು.
ಚುನಾವಣಾ ಭರವಸೆಗಳ ಅನುಷ್ಠಾನದಿಂದ ಬೊಕ್ಕಸಕ್ಕೆ ವರ್ಷಕ್ಕೆ 50,000 ಕೋಟಿ ರೂ.ಗಳಷ್ಟು ಹೊರೆ ಬೀಳಲಿದೆ ಎಂಬುದು ಸರ್ಕಾರದ ಆರಂಭಿಕ ಅಂದಾಜು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದ ಬಜೆಟ್ ಗಾತ್ರವು 3.1 ಲಕ್ಷ ಕೋಟಿ ರೂಪಾಯಿ ಎಂದ ಅವರು ನಮ್ಮ ಸರ್ಕಾರವು ವರ್ಷಕ್ಕೆ 50,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಅಸಾಧ್ಯವೆಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.