ಸತತ 14ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ: ಬಜೆಟ್ ಮುಖ್ಯಾಂಶಗಳು ಇಂತಿವೆ

ಬೆಂಗಳೂರು: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಪೂರೈಕೆಗಾಗಿ ಬಜೆಟ್ ನ ಗಾತ್ರವನ್ನು 18,565 ಕೋಟಿ ರೂ ಹೆಚ್ಚಳ ಮಾಡಲಾಗಿದೆ. ಈ ಬಾರಿ 3,27,747 ಕೋಟಿ ರೂ ಗಾತ್ರದ ಬಜೆಟ್ ಮಂಡನೆಯಾಗಿದೆ.

ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಜಾರಿಗೆ ಐದು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.

ಗೃಹ ಲಕ್ಷ್ಮಿ ಯೋಜನೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ನಿಗದಿ ಪಡಿಸಲಾಗಿದೆ.
ಉಚಿತ ವಿದ್ಯುತ್ – ಇಂಧನ ಇಲಾಖೆ – 22,773 ಕೋಟಿ ನಿಗದಿ ಪಡಿಸಲಾಗಿದೆ.
ಹತ್ತು ಕೆಜಿ ಅಕ್ಕಿ ಭಾಗ್ಯ ಯೋಜನೆ – ಆಹಾರ ಇಲಾಖೆಗೆ 10,460 ಕೋಟಿ ನಿಗದಿ ಪಡಿಸಲಾಗಿದೆ.
ಉಚಿತ ಬಸ್ ಪ್ರಯಾಣ‌- ಸಾರಿಗೆ ಇಲಾಖೆಗೆ 16,638 ಕೋಟಿ ರೂ‌ ನಿಗದಿ ಪಡಿಸಲಾಗಿದೆ.
ಯುವಭತ್ಯೆ ಯೋಜನೆ – ಕೌಶಲ್ಯಾಭಿವೃದ್ಧಿ ಇಲಾಖೆಗೆ ಇತರೆ ವರ್ಗದಲ್ಲಿ ಅನುದಾನ ಸೇರಿಸಲಾಗಿದೆ.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಗಮನದಲ್ಲಿಟ್ಟುಕೊಂಡು ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿಗೆ ಬಜೆಟ್ ಗೆ ಶೇ.15ರಷ್ಟು ಮೀಸಲು. ಸಮಾಜ ಕಲ್ಯಾಣ ಇಲಾಖೆಗೆ ಶೇ.13ರಷ್ಟು ಅನುದಾನ ಮೀಸಲಿರಿಸಲಿದೆ.

ಇಲಾಖಾವಾರು ಅನುದಾನ

ಶಿಕ್ಷಣ – 37,587 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 24,166 ಕೋಟಿ
ಇಂಧನ – 22,773 ಕೋಟಿ
ನೀರಾವರಿ – 19,044 ಕೋಟಿ
ಗ್ರಾಮೀಣಾಭಿವೃದ್ಧಿ – 18,038 ಕೋಟಿ
ಒಳಾಡಳಿತ ಮತ್ತು ಸಾರಿಗೆ – 16,638 ಕೋಟಿ
ಕಂದಾಯ – 16,167 ಕೋಟಿ
ಆರೋಗ್ಯ – 14,950 ಕೋಟಿ
ಸಮಾಜ ಕಲ್ಯಾಣ – 11,173 ಕೋಟಿ
ಆಹಾರ ಮತ್ತು ನಾಗರೀಕ ಪೂರೈಕೆ – 10,460 ಕೋಟಿ
ಲೋಕೋಪಯೋಗಿ – 10,143 ಕೋಟಿ
ಕೃಷಿ – 5,860 ಕೋಟಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ – 3,024 ಕೋಟಿ
ಇತರೆ – 1,09,639 ಕೋಟಿ

ರಾಜಸ್ವ ಆದಾಯ ನಿರೀಕ್ಷಿತ ಖಾತೆಗಳು

ವಾಣಿಜ್ಯ ತೆರಿಗೆ ಇಲಾಖೆ – 1,01,000 ಲಕ್ಷ ಕೋಟಿ
ಅಬಕಾರಿ ರಾಜಸ್ವ – 36000 ಕೋಟಿ
ನೋಂದಣಿ ಮತ್ತು ಮುದ್ರಾಂಕ – 25,000 ಕೋಟಿ
ಒಟ್ಟು – 1.,62,000 ಕೋಟಿ
ವಾಹನ ನೋಂದಣಿ- 11,500 ಕೋಟಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ- 9 ಸಾವಿರ ಕೋಟಿ .

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ., ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಅನುದಾನ ನೀಡಲಾಗಿದೆ. ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಅದನ್ನು ಎರಡು ದಿನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅಲ್ಲದೇ, ಮೊಟ್ಟೆ ಮತ್ತು ಚಿಕ್ಕಿ ಭಾಗ್ಯ 10ನೇ ತರಗತಿಯ ವಿದ್ಯಾರ್ಥಿಗಳಿಗೂ ದೊರೆಯಲಿದೆ.

ಸ್ವಾವಲಂಬಿ ಸಾರಥಿ ಯೋಜನೆ ಮರು ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವ ಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇಕಡಾ 75 ರಷ್ಟು, ಗರಿಷ್ಠ ನಾಲ್ಕೂ ಲಕ್ಷ ರೂ. ಸಹಾಯಧನ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಮಾಡಿರುವ ಯೋಜನೆ ಇದಾಗಿದೆ.

ಹಿಂದಿನ ಸರಕಾರದ ಭಾಗ್ಯಲಕ್ಷ್ಮಿ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆಗಳಿಗೆ ಬಜೆಟ್​ನಲ್ಲಿ ಕೊಕ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಅನ್ನು ಸ್ಥಾಪಿಸಲಿದೆ, ಇದು 10,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಬಜೆಟ್ ದಾಖಲೆ ಬಹಿರಂಗಪಡಿಸಿದೆ.

ಈ ವರ್ಷ 100 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮವನ್ನೂ ಸರ್ಕಾರ ಸ್ಥಾಪಿಸಲಿದೆ.

ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು 175% ರಿಂದ 185% ಕ್ಕೆ ಹೆಚ್ಚಿಸಲು ಸಿದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.