ಸಿಎಂ ಸಿದ್ದರಾಮಯ್ಯ : ಮುಂದಿನ ಐದು ವರ್ಷಗಳಲ್ಲಿ ಭಾರತ, ಕರ್ನಾಟಕ ಏಡ್ಸ್ ಮುಕ್ತವಾಗಲಿ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನ 2023 ಮತ್ತು 25ನೇ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986ರಲ್ಲಿ ಭಾರತದಲ್ಲಿ ಹಾಗೂ 1987ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು” ಎಂದರು.”ಮುಂದಿನ ಐದು ವರ್ಷಗಳಲ್ಲಿ ಭಾರತ ಹಾಗೂ ಕರ್ನಾಟಕ ಏಡ್ಸ್ ಮುಕ್ತ ದೇಶ, ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಏಡ್ಸ್ ತಡೆಗಟ್ಟಲು ಆರೋಗ್ಯ ಇಲಾಖೆಯವರು ಹೆಚ್ಚು ಸಂಶೋಧನೆಗಳನ್ನು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

“ಏಡ್ಸ್​ ಕುರಿತು ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದರೆ, ಇದು ವಾಸಿಯಾಗದ ರೋಗ. ಇಷ್ಟೆಲ್ಲಾ ವಿಜ್ಞಾನದ ಬೆಳವಣಿಗೆಯಾದರೂ ಏಡ್ಸ್ ರೋಗಕ್ಕೆ ಮಾತ್ರ ಇನ್ನೂ ಔಷಧ ಕಂಡು ಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಸಮುದಾಯಗಳು ಮುನ್ನಡೆಸಲಿ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷದ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 2017ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ” ಎಂದು ತಿಳಿಸಿದರು.

“ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಐದಾರು ವರ್ಷಗಳಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಸೊನ್ನೆಗೆ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ. ರೋಗಿಗಳೊಂದಿಗೆ ಮಾತನಾಡಿದರೆ ರೋಗ ಬರುತ್ತದೆ ಎಂದು ಕೆಲವರಿಗೆ ತಪ್ಪು ತಿಳಿವಳಿಕೆಗಳಿವೆ. ಆದರೆ, ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ ಗೊತ್ತಿರಬೇಕು” ಎಂದರು.

ಏಡ್ಸ್ ಪೀಡಿತರೊಂದಿಗೆ ಸಿಎಂ ಮಾತುಕತೆ: ಸಮಾರಂಭದಲ್ಲಿ ಭಾಗವಹಿಸಿದ್ದ ಏಡ್ಸ್ ಪೀಡಿತ ವ್ಯಕ್ತಿಯೊಂದಿಗೆ ಮಾತನಾಡಿದ ಸಿಎಂ, ಕಾಯಿಲೆ ಬಂದ ನಂತರ 26 ವರ್ಷಗಳ ಕಾಲ ಬದುಕಿದ್ದಾರೆ ಹಾಗೂ ಧೈರ್ಯವಾಗಿದ್ದಾರೆ ಎಂದು ಸಭಿಕರಿಗೆ ತಿಳಿಸಿದರು. ಆಂಜಿಯೋಪ್ಲಾಸ್ಟಿಯಾಗಿದ್ದರೂ ಧೈರ್ಯವಾಗಿ ಅದನ್ನು ಎದುರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.”ಇತ್ತಿಚಿನ ದಿನಗಳಲ್ಲಿ ಹೆಚ್​ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್​ಐವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು. 2015 – 2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ, ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ” ಎಂದು ಹೇಳಿದರು.